ದಾವಣಗೆರೆ, ಮೇ 27- ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಸುಗ್ರೀವಾಜ್ಞೆ-2020 ಅನ್ನು ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಉಪವಿಭಾಗಾಧಿಕಾರಿ ಕಚೇರಿ ಮುಂ ಭಾಗ ಜಮಾಯಿಸಿದ್ದ ಸಂಘಟನೆಯ ಪದಾಧಿ ಕಾರಿಗಳು ಉಪವಿಭಾಗಾಧಿಕಾರಿ ಮುಖಾಂ ತರ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ಜಗತ್ತನ್ನೇ ಕೊರೊನಾ ಆವರಿಸಿದೆ. ಲಕ್ಷಾಂತರ ಜನರ ಸಾವು-ನೋವುಗಳಾಗಿವೆ. ದಿನೇ ದಿನೇ ರೋಗವೂ ವ್ಯಾಪಕವಾಗುತ್ತಿದೆ. ಇದನ್ನು ನಿಯಂತ್ರಣ ಮಾಡಲು ಸರ್ಕಾರ ಘೋಷಣೆ ಮಾಡಿರುವ ಲಾಕ್‍ಡೌನ್ ಮತ್ತಿತರೆ ಕ್ರಮಗಳಿಂದ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಕೃಷಿ ರಂಗದ ಸಂಕಷ್ಟಗಳು ಮತ್ತಷ್ಟು ಉಲ್ಬಣಿಸಿವೆ. ಸಂಕಷ್ಟದಲ್ಲಿರುವ ಗ್ರಾಮೀಣ ಜನತೆಗೆ ನೆರವು ನೀಡಬೇಕಾದ ಸಮಯದಲ್ಲಿ ರೈತರ ಬಾಗಿಲಿಗೆ ಮಾರುಕಟ್ಟೆ, ಎಪಿಎಂಸಿಗಳಲ್ಲಿ ಇರುವ ದೋಷಗಳಿಗೆ ಪರಿಹಾರ ಸ್ಪರ್ಧಾತ್ಮಕ ಬೆಲೆಯ ಹೆಸರಿನಲ್ಲಿ ರಾಜ್ಯದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿಗ ಳನ್ನು ತಂದು ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಯನ್ನು ಸುಗ್ರೀ ವಾಜ್ಞೆ ಮೂಲಕ ಜಾರಿ ಮಾಡಲು ಹೊರಟಿ ರುವುದು ಖಂಡನೀಯ ಎಂದು ಪ್ರತಿಭಟನಾ ಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ಅಕ್ರಮ ಕಮೀಷನ್ ವಸೂಲಿ ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಗೆ ರೈತರ ಸಾಗಾಣಿಕೆ ವೆಚ್ಚವನ್ನು ಸರ್ಕಾರಗಳೇ ಭರಿಸುವುದು, ಮಾರುಕಟ್ಟೆಗೆ ಬರುವ ರೈತರ ವಾಹನಗಳಿಗೆ ಟೋಲ್ ಫ್ರೀ ಮಾಡುವುದು, ಉತ್ತಮ ದರಗಳು ಸಿಗದ ಸಂದರ್ಭದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿಯೇ ದಾಸ್ತಾನು ಮಾಡಲು ಅಗತ್ಯವಿರುವ ಗೋದಾಮುಗಳು, ಶೈತ್ಯಾಗಾರಗಳ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಲ್ಲೂರು ರವಿ ಕುಮಾರ್, ಹುಚ್ಚವ್ವನಹಳ್ಳಿ ಮಂಜುನಾಥ್, ತಿಪ್ಪೇಸ್ವಾಮಿ, ಪರಶುರಾಮ್, ಹೆಚ್.ಜಿ. ಉಮೇಶ್, ಗುಮ್ಮನೂರು ಬಸವರಾಜ್, ಪರಮೇಶ್, ನಿಂಗಪ್ಪ, ರೇವಣ ಸಿದ್ದಪ್ಪ, ಭಗತ್ ಸಿಂಹ, ಭೀಮಣ್ಣ ಸೇರಿದಂತೆ ಮತ್ತಿತರರಿದ್ದರು.