ದಾವಣಗೆರೆ, ಮೇ 26- ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಸಂತಸದ ಜೊತೆಗೆ ನೆಮ್ಮದಿಯ ವಾತಾವರಣ ಮೂಡಿದೆ. ಇದಕ್ಕಾಗಿ ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬ ಅಧಿಕಾರಿಗಳಿಗೂ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಪರವಾಗಿ ಅಭಿನಂದಿಸುವುದಾಗಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಹೇಳಿದರು.
ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್-19 ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿರುವ ಸಮಯದಲ್ಲಿ ಜವಾಬ್ದಾರಿ ಹೆಚ್ಚಿದೆ. ಅಧಿಕಾರಿಗಳು ವಿಶೇಷವಾಗಿ ಜಾಗೃತರಾಗುವ ಮೂಲಕ ಅತೀ ಹೆಚ್ಚು ಕೆಲಸ ಮಾಡಬೇಕು ಎಂದರು.
ಜಿಲ್ಲಾಡಳಿತ, ಸಚಿವರು ಹಾಗೂ ಜನಪ್ರತಿನಿಧಿಗಳು ಕೆಲಸ ಮಾಡುತ್ತಿಲ್ಲ ಎನ್ನುವ ಭಾವನೆ ವ್ಯಕ್ತವಾಗಬಾರದು. ಗ್ರೀನ್‌ಜೋನ್‍ಲ್ಲಿದ್ದ ಜಿಲ್ಲೆಯಲ್ಲಿ ಒಂದೇ ಬಾರಿಗೆ ಕೊರೊನಾ ಪ್ರಕರಣಗಳು ಏರಿಕೆ ಕಂಡು ಬಂದವು. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲರೂ ತುಂಬಾ ಸಕ್ರಿಯವಾಗಿ ಕೆಲಸದಲ್ಲಿ ತೊಡಗಿಕೊಂಡು ಮತ್ತೆ ಗ್ರೀನ್ ಜೋನ್ ಜಿಲ್ಲೆಯಾಗಿಸಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಬಹಳ ಎಚ್ಚರಿಕೆಯಿಂದ ಕೆಲಸ ಪಾಲನೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ 14 ಜನ ಇನ್ಸಿಡೆಂಟ್ ಕಮಾಂಡರ್‍ಗಳನ್ನು ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ನೇಮಕ ಮಾಡಲಾಗಿದೆ. ತಮಗೆ ವಹಿಸಿರುವ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ
ಹೆಚ್ಚು ಆಸಕ್ತಿ ವಹಿಸಿ ನಿಮ್ಮ ಭಾಗದಲ್ಲಿ ಕೊರೊನಾ ನಿಯಂತ್ರಿಸಲು ಶ್ರಮಿಸಬೇಕು. ಮುಂದಿನ ಬಾರಿ ಸಭೆಗೆ ಆಗಮಿಸಿದಾಗ ಪ್ರತಿಯೊಬ್ಬ ಇನ್ಸಿಡೆಂಟ್ ಕಮಾಂಡರ್‍ಗಳು
ರಾಂಡಮ್ ಸ್ಯಾಂಪಲ್ ಸಂಗ್ರಹಿಸಿರುವ ಬಗ್ಗೆ ವರದಿ ನೀಡಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಂದ ನಮ್ಮ ಜಿಲ್ಲೆಗಳಿಗೆ ಬರುವವರ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಕಡ್ಡಾಯವಾಗಿ ಕ್ವಾರಂಟೈನ್‍ಲ್ಲಿ ಇರಿಸಬೇಕು. ಹೊರ ರಾಜ್ಯದಿಂದ ಬಂದವರಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಲಾಡ್ಜ್‍ಗಳಲ್ಲಿ ಹಾಗೂ ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗಿರುವವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿವಿಧ ಇಲಾಖೆಗಳ ಸಹಾಯದೊಂದಿಗೆ ಉತ್ತಮವಾದ ಆಹಾರ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ವಿಶೇಷವಾಗಿ ಸಣ್ಣ ಮಕ್ಕಳ ಕಾಳಜಿ ವಹಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಕಂಟೈನ್‍ಮೆಂಟ್ ಜೋನ್‍ನಿಂದ ಅನವಶ್ಯಕವಾಗಿ ಹೊರಗಡೆ ಬರುವವರ ಮೇಲೆ ಕೇಸ್ ದಾಖಲು ಮಾಡಲಾಗುತ್ತಿದೆ. ಅಲ್ಲಿನ ಜನರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ದೊರಕಿಸಿ ಕೊಡುವ ವ್ಯವಸ್ಥೆ ಮಾಡಲಾಗಿದ್ದು, ಹಣದ ಅವಶ್ಯಕತೆಗಾಗಿ ಅಲ್ಲಿ ಮೊಬೈಲ್ ಎಟಿಎಂ ನೀಡಲಾಗಿದೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಎಂಎಲ್‍ಸಿ ಅಬ್ದುಲ್ ಜಬ್ಬಾರ್, ಜಿ.ಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಎಸಿ ಮಮತಾ ಹೊಸಗೌಡರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ ಉಪಸ್ಥಿತರಿದ್ದರು.