ಹರಿಹರದ ಸಭೆಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್ ಸರ್ಕಾರಕ್ಕೆ ಒತ್ತಾಯ
ಹರಿಹರ, ಮೇ 26- ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಹೋಬಳಿ ಮಟ್ಟದಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆದು ರೈತರ ಪರವಾಗಿ ನಿಲ್ಲಬೇಕು ಎಂದು ಜಿ.ಪಂ ಸದಸ್ಯ ಹಾಗೂ ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು.
ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಖರೀದಿ ಕೇಂದ್ರದ ಮುಖಾಂತರ ಸರ್ಕಾರವೇ ರೈತರ ಭತ್ತವನ್ನು ಖರೀದಿಸಲು, ರೈತರ ಪರವಾಗಿ ಮನವಿ ಅರ್ಪಿಸಿ, ಪತ್ರಕರ್ತ ರೊಂದಿಗೆ ಪಟೇಲ್ ಮಾತನಾಡಿದರು.
ಸರ್ಕಾರ ಮಧ್ಯ ಪ್ರವೇಶಿಸಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಮಾಡಬೇಕು. ಬೆಂಬಲ ಬೆಲೆ ಎಂಬ ಪದವನ್ನು ಬಳಸಬೇಕಾದರೆ ಅದಕ್ಕೆ ದರವು ಕೂಡ ಹೊಂದಾಣಿಕೆಯಾಗುವಂತಿರಬೇಕು.
ಕೋವಿಡ್-19ನಿಂದ ಎಲ್ಲವೂ ದುಷ್ಪರಿಣಾಮವಾಗಿದೆ. ಬಹುಶಃ ಒಂದು ಕಡೆ ಹಸಿವಿನಿಂದ ತತ್ತರಿಸಿದರೆ, ಇನ್ನೊಂದು ಕಡೆ ರೈತರ ಉತ್ಪನ್ನಗಳು ಹೊಲದಲ್ಲಿ ನಾಶವಾಗುತ್ತಿವೆ. ಲಾಕ್ಡೌನ್ಗೆ ಮೊದಲೇ ಕೃಷಿ ಉತ್ಪನಗಳನ್ನು ಮತ್ತು ಗ್ರಾಹಕರ ಮಧ್ಯೆ ಸಂಪರ್ಕದ ವಿಚಾರವಾಗಿ ಆಲೋಚನೆ ಮಾಡಿದ್ದರೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಕೃಷಿ ಉತ್ಪನ್ನಗಳಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಖರೀದಿ ಕೇಂದ್ರವನ್ನು ಜಿಲ್ಲಾ ಮಟ್ಟದಲ್ಲಿ ತೆರೆದಿದ್ದಾರೆ. ಆದರೆ ಸ್ಥಳೀಯವಾಗಿ ತೆರೆದು ಮಾಹಿತಿ ನೀಡಿದ್ದರೆ ರೈತರಿಗೆ ತೊಂದರೆ ಬರುತ್ತಿರಲ್ಲಿಲ್ಲ ಎಂದು ಹೇಳಿದರು.
ಖರೀದಿ ಕೇಂದ್ರವನ್ನು ಆನ್ಲೈನ್ನಲ್ಲಿ ನೋಂದಣಿ ಮಾಡಬೇಕಾ? ರೈತರಿಗೆ ಮೊಬೈಲ್ ಬಳಸಲು ಬರುವುದಿಲ್ಲ. ಅವರಿಗೆ ವ್ಯವಸಾಯ, ಗೊಬ್ಬರ ಹಾಕುವುದು, ಕಳೆ ತೆಗೆಯುವುದು, ಔಷಧಿ ಹಾಕುವುದು ಗೊತ್ತಿದೆ. ಅದನ್ನು ಬಿಟ್ಟು ಇಂಟರ್ನೆಟ್ನಲ್ಲಿ ನೋಂದಣಿ ಮಾಡಲು ಬರುವುದಿಲ್ಲ. ಇನ್ನು ಮೇಲೆ ಆನ್ಲೈನ್ನಲ್ಲಿ ರಿಜಿಸ್ಟರ್ ಮಾಡಿ ಬರಬೇಕು ಎಂದರೆ ಅದು ಸರಿಯಾದ ಪದ್ದತಿಯಲ್ಲ. ಸರ್ಕಾರವು ನಿಜವಾಗಿ ರೈತರ ಪರವಾಗಿ ಖರೀದಿ ಕೇಂದ್ರವನ್ನು ತೆರೆದಿದ್ದರೆ ರೈತರ ಪಹಣಿ ತೆಗೆದುಕೊಂಡು ಬರಬೇಕು, ಭತ್ತವನ್ನು ನೀಡ ಬೇಕು. ಆದರೆ ಯಾವುದೇ ಮಿತಿ ಇರಬಾ ರದು. ರೈತರು ಎಷ್ಟೇ ಭತ್ತವನ್ನು ತಂದರೂ ತೆಗೆದುಕೊಳ್ಳುವಂತಿರ ಬೇಕು. ಗುಣಮಟ್ಟದ ತೇವಾಂಶ ಕೇಳಲಿ ಆ ಗುಣಮಟ್ಟದ ತೇವಾಂಶ ಇದ್ದರೆ ಖರೀದಿ ಮಾಡಲಿ. ಆದರೆ ಖರೀದಿ ಮಾಡುವಲ್ಲಿ ವ್ಯತ್ಯಾಸ ಮಾಡಬಾರದು.
ಎಂ.ಎನ್.ಸಿ. ಕಂಪನಿಗಳಿಂದ ನ್ಯಾಯ ಸಿಗಲಿಕ್ಕೆ ಸಾಧ್ಯವೇ ಇಲ್ಲ : ಎಪಿಎಂಸಿ ವರ್ತಕರಿಂದ ತೊಂದರೆ ಆಗುತ್ತದೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಎಂ.ಎನ್.ಸಿ. ಕಂಪನಿಗಳಿಗೆ ಕೊಡುತ್ತಿದ್ದಾರೆ. ಎಪಿಎಂಸಿ ವರ್ತಕರಿಂದ ನಮಗೆ ನ್ಯಾಯ ಸಿಗಲಿಕ್ಕೆ ಸಾಧ್ಯ ಆಗಿಲ್ಲ. ಇನ್ನೂ ಎಂ.ಎನ್.ಸಿ. ಕಂಪನಿಗಳಿಂದ ನ್ಯಾಯ ಸಿಗಲಿಕ್ಕೆ ಸಾಧ್ಯವೇ ಇಲ್ಲ. ಸರ್ಕಾರ ಎಪಿಎಂಸಿ ಆಡಳಿತವನ್ನು ಇನ್ನಷ್ಟು ಬಲಿಷ್ಠ ಮಾಡಿ ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಎಪಿಎಂಸಿ ಗೆ ಎಲ್ಲಾ ರೈತರು ಬೆಳೆದ ಉತ್ಪನ್ನಗಳನ್ನು ತಂದು ಮಾರಾಟ ಮಾಡುವಂತಹ ವ್ಯವಸ್ಥೆ ಕಲ್ಪಿಸಬೇಕು. ಎಪಿಎಂಸಿಗೆ ತಿದ್ದುಪಡಿ ತಂದರು. ಗುತ್ತಿಗೆ ಕೃಷಿಯನ್ನು ತಂದರು, ಈಗ ವಿದ್ಯುತ್ ಮಾರಾಟ ಮಾಡಲಿಕ್ಕೆ ಹೊರಟಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಲಾಕ್ಡೌನ್ ಎಂಬುದನ್ನು ಪರ್ಮನೆಂಟ್ ಮಾಡಲಿಕ್ಕೆ ಹೊರಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಓಂಕಾರಪ್ಪ, ಪ್ರಭುಗೌಡ, ಶಂಭುಲಿಂಗಪ್ಪ, ಶಿವಶಂಕ್ರಪ್ಪ, ಮಹೇಶ್ವರಪ್ಪ ದೊಗ್ಗಳ್ಳಿ, ಬಸಪ್ಪ, ಮಂಜುನಾಥ್, ಲೋಕೇಶ್ ಹಾಗೂ ಇತರರು ಹಾಜರಿದ್ದರು.
ಕೇಂದ್ರದಲ್ಲಿ ಎಷ್ಟು ಜನ ರೈತರಿಗೆ ಸರಬರಾಜು ಮಾಡುವ ಶಕ್ತಿ ಇದೆ. ಅಷ್ಟೊಂದು ಖರೀದಿ ಮಾಡಬೇಕು. ಖರೀದಿ ಕೇಂದ್ರವನ್ನು ಹೋಬಳಿ ಮಟ್ಟಕ್ಕೆ ಸೀಮಿತ ಮಾಡಬೇಕು. ಖರೀದಿ ಕೇಂದ್ರದಲ್ಲಿ 2,500 ರೂಪಾಯಿ ದರದಲ್ಲಿ ಸರ್ಕಾರ ಖರೀದಿ ಮಾಡಬೇಕು. ಮಿತಿ ಇಲ್ಲದೆ ಖರೀದಿಯನ್ನು ಮಾಡಬೇಕು.
ಖರೀದಿಸಲು ದಲ್ಲಾಳಿಗಳು ಹಳ್ಳಿಗೆ ಬರುತ್ತಾರೆ ಅವರು ಬರುವುದು ಅವರು ನೀಡಿ ರುವ ಸಾಲವನ್ನು ಪಡೆಯಲು ಬರುತ್ತಿದ್ದಾರೆ. ಅವರು ಹೇಳಿದ ದರಕ್ಕೆ ಖರೀದಿ ಆಗುತ್ತದೆ. ಇದು ಸರಿಯಾದ ಬೆಳವಣಿಗೆಯಲ್ಲ. ಅಕ್ಕಿ ಗಿರಣಿ ವ್ಯಾಪಾರಸ್ಥರು ಕೂಡಾ ಸಂಕಷ್ಟದಲ್ಲಿ ಇದ್ದಾರೆ. ಇದರಿಂದಾಗಿ ಭತ್ತದ ಖರೀದಿ ಮೇಲೆ ಪ್ರಕೃತಿ ಪರಿಣಾಮ ಬೀರಿದೆ.
ಸರ್ಕಾರ ಒಂದು ತಾನು ಖರೀದಿಸಬೇಕು, ಖರೀದಿ ಮಾಡುವವರು ಸಹ ಅಷ್ಟೇ ಆಸಕ್ತಿಯಿಂದ ಖರೀದಿಸಬೇಕು. ಎರಡೂ ಪ್ರಕ್ರಿಯೆ ಜೊತೆ ಜೊತೆಯಲ್ಲಿ ಸಾಗಿದರೆ ಮಾತ್ರ ನಮಗೆ ನ್ಯಾಯ ಸಿಗಲಿಕ್ಕೆ ಸಾಧ್ಯವಿದೆ. ಸರ್ಕಾರ ಖರೀದಿ ಕೇಂದ್ರ ತೆರೆಯಲು ಶಿಫಾರಸ್ಸು ಮಾಡಿದೆ ಆದರೆ ಅದು ಯಾವುದೇ ಫಲವನ್ನು ನೀಡಿಲ್ಲ.
ದಾವಣಗೆರೆ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಭತ್ತವನ್ನು ಬೆಳೆಯುತ್ತಾರೆ. ಭತ್ತವನ್ನು ಬೆಳೆ ಯುವುದರಿಂದ ಅನೇಕ ಉದ್ಯೋಗ ಸೃಷ್ಟಿ ಆಗುತ್ತದೆ. ಖರೀದಿ ಕೇಂದ್ರ ತೆರೆದಿರುವುದು ಹಿಂದಿನ ಮಳೆಗಾಲದ್ದು. ಬೇಸಿಗೆ ಭತ್ತದ ಖರೀದಿ ಕೇಂದ್ರವಲ್ಲ 2019-20ರ ಅನ್ವಯ ದರವನ್ನು ನಿಗದಿ ಮಾಡಬೇಕು. 2020-21 ರ ದರ ಇನ್ನೂ ನಿಗದಿ ಆಗಬೇಕಿದೆ. ಅದು ಸದ್ಯದಲ್ಲಿ ಜೂನ್ನಲ್ಲಿ ನಿಗದಿ ಆಗುತ್ತದೆ. ಮೇ 31 ಎಂದು ದಿನಾಂಕ ಮಿತಿಗೊಳಿಸಿದ್ದಾರೆ. ಅದನ್ನು ವಿಸ್ತರಣೆ ಮಾಡಬೇಕು. ರೈತರ ಒಂದು ಕಾಳು ಯಾವುದೇ ಹಳ್ಳಿಯಲ್ಲಿ ಇರ ಕೂಡದು ಅಲ್ಲಿಯವರೆಗೆ ವಿಸ್ತರಣೆ ಆಗಬೇಕು.
ಸರ್ಕಾರ ರೈತರಿಗೆ ಎಂತಹ ವಾತಾವರಣ ಸೃಷ್ಟಿ ಮಾಡಬೇಕು ಎಂದರೆ ಖರೀದಿ ಕೇಂದ್ರ ಮತ್ತು ಖರೀದಿದಾರರ ಮಧ್ಯೆ ಸ್ಪರ್ಧೆ ಬೀಳಬೇಕು. ಆಗ ದರ ರೈತರಿಗೆ ಸಿಗಲಿಕ್ಕೆ ಸಾಧ್ಯವಿದೆ. ಇಲ್ಲದೆ ಹೋದರೆ ಸರ್ಕಾರ ಕೈ ಚೆಲ್ಲಿದರೆ, ಸಾಲ ಮಾಡಿದವರು ಖರೀದಿದಾರರ ಬಾಯಿಗೆ ಬಂದ ದರಕ್ಕೆ ಕೊಡಬೇಕಾಗುತ್ತದೆ. ಇದರಿಂದಾಗಿ ಮುಂದಿನ ಮಳೆಗಾಲದ ಬೆಳೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆದು ಸರ್ಕಾರ ರೈತರ ಪರವಾಗಿ ನಿಲ್ಲಬೇಕು ಎಂದು ತೇಜಸ್ವಿ ಪಟೇಲ್ ಹೇಳಿದರು.