ಹರಿಹರ, ಮೇ 25- ಮುಸ್ಲಿಂ ಸಮುದಾಯದವರು ಈ ಬಾರಿ ರಂಜಾನ್ ಹಬ್ಬವನ್ನು ಮನೆಯಲ್ಲೇ ದೇವರಿಗೆ ಮತ್ತು ಹಿರಿಯರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳವಾಗಿ ಆಚರಣೆ ಮಾಡಿದರು.
ಪ್ರತಿ ವರ್ಷ ರಂಜಾನ್ ಹಬ್ಬ ಬಂತು ಎಂದರೆ ಮುಸ್ಲಿಂ ಸಮುದಾಯದವರಲ್ಲಿ ಎಲ್ಲಿಲ್ಲದ ಸಡಗರ, ಸಂಭ್ರಮ ಮನೆ ಮಾಡಿರುತ್ತಿತ್ತು. ಈ ಹಬ್ಬದಲ್ಲಿ ಸಮಾಜದ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಈದ್ಗಾ ಮೈದಾನಕ್ಕೆ ಹೋಗಿ ಅಲ್ಲಿ ದೇವರಿಗೆ ಮತ್ತು ಹಿರಿಯರಿಗೆ ಶ್ರದ್ಧಾ – ಭಕ್ತಿಯಿಂದ ಪೂಜೆ ಮಾಡಿ, ಸಾಮೂಹಿಕವಾಗಿ ನಮನ ಸಲ್ಲಿಸುತ್ತಿದ್ದರು. ಅಲ್ಲಿಂದ ಮನೆಗೆ ಬಂದು ಮನೆಯ ಕುಟುಂಬದ ಸದಸ್ಯರು ವಿವಿಧ ಬಗೆಯ ರುಚಿ ರುಚಿಯ ಅಡುಗೆಯನ್ನು ತಯಾರಿಸಿ ಅದನ್ನು ಕುಟುಂಬದ ಸದಸ್ಯರು ಎಲ್ಲರೂ ಒಟ್ಟಾಗಿ ಸೇರಿ ಸಹ ಭೋಜನ ಮಾಡಿ ರಂಜಾನ್ ಹಬ್ಬ ವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದರು.
ಆದರೆ, ಈ ಬಾರಿ ದೇಶದಲ್ಲಿ ಕೊರೊನಾ ವೈರಸ್ ರೋಗದ ಭಯದಿಂದಾಗಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದೇ ಇರುವುದರಿಂದ ಮುಸ್ಲಿಂ ಸಮುದಾಯದ ಹಳ್ಳದಕೇರಿ, ಇಂದ್ರಾನಗರ, ಗಾಂಧಿ ನಗರ, ಟಿಪ್ಪುನಗರ, ಕಾಳಿದಾಸ ನಗರ, ಹೈಸ್ಕೂಲ್ ಬಡಾವಣೆ, ಹರ್ಲಾಪುರ ಬಡಾವಣೆ ಸೇರಿದಂತೆ ಎಲ್ಲಾ ಪ್ರಾರ್ಥನಾ ಮಂದಿರಗಳಲ್ಲಿ ಸಮುದಾಯದ ಐದು ಜನ ಪ್ರಮುಖರು ಪ್ರಾರ್ಥನೆ ಸಲ್ಲಿಸಿದರೆ, ಉಳಿದವರು ಮನೆಯಲ್ಲಿ ದೇವರಿಗೆ ಮತ್ತು ಹಿರಿಯರಿಗೆ ಶ್ರದ್ಧಾ – ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳವಾಗಿ ರಂಜಾನ್ ಹಬ್ಬವನ್ನು ಆಚರಿಸಿದರು.
ನಂತರ ಮನೆಯಲ್ಲಿ ವಿವಿಧ ಬಗೆಯ ರುಚಿ ರುಚಿಯ ಅಡುಗೆಯನ್ನು ತಯಾರಿಸಿಕೊಂಡು ಕುಟುಂಬದ ಸದಸ್ಯರು ಸೇರಿ ಸಹ ಭೋಜನ ಮಾಡಿ ರಂಜಾನ್ ಹಬ್ಬವನ್ನು ಆಚರಣೆ ಮಾಡಿದರು. ಈ ಬಾರಿಯ ಹಬ್ಬದ ಸಮಯದಲ್ಲಿ ಹೆಚ್ಚಿನದಾಗಿ ಹೊಸದಾದ ಬಟ್ಟೆಗಳನ್ನು ಧರಿಸಿ ಹೆಚ್ಚಿನ ಆಡಂಬರ ಕಂಡುಬರಲಿಲ್ಲ.
ಮುಂಜಾಗ್ರತಾ ಕ್ರಮಗಳನ್ನು ಪೊಲೀಸ್ ಅಧಿಕಾರಿಗಳಾದ ಎಸ್. ಶಿವಪ್ರಸಾದ್, ಎ. ಶೈಲಾಶ್ರೀ, ಭಾರತಿ ಕಂಕಣವಾಡಿ ಮತ್ತು ಸಿಬ್ಬಂದಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಧರ್ಮಗುರುಗಳಾದ ಸೈಯದ್ ಶಂಶುದ್ದಿನ್ ಸಾಬ್ ಬರಕಾತಿ, ನಗರಸಭೆ ಸದಸ್ಯರಾದ ಆರ್.ಸಿ. ಜಾವೇದ್, ಎಂ.ಎಸ್. ಬಾಬುಲಾಲಾ, ದಾದಾ ಖಲಂದರ್, ಮುಜಾಮಿಲ್, ಮಾಜಿ ಸದಸ್ಯರಾದ ಬಿ.ಕೆ. ಸೈಯದ್ ರೆಹಮಾನ್, ಹಾಜಿ ಅಲಿ, ಮಹಮ್ಮದ್ ಸಿಗ್ಬತ್ ಉಲ್ಲಾ, ಏಜಾಜ್ ಮಹಮ್ಮದ್, ಹಬೀಬ್ಉಲ್ಲಾ, ಮುಖಂಡರಾದ ಮಹಮ್ಮದ್ ಷರೀಫ್ ಅಶ್ರಫಿ, ಮಹಮ್ಮದ್ ಫೈರೋಜ್, ಕೆ. ಆಸೀಫ್, ನಜೀರ್ ಆಮ್ಮದ್, ಸನಾವುಲ್ಲಾ, ಬಿ. ಮುಗ್ದುಂ, ಬಿಸ್ಮಿಲ್ಲಾ ಖಾನ್, ಎಸ್.ಎ.ಖಾನ್, ರಿಯಾಜ್ ಅಹ್ಮದ್, ಮಹಮ್ಮದ್ ಸಾಬ್ ಮತ್ತು ಇತರರು ಹಾಜರಿದ್ದರು.