ಕೇಂದ್ರದ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಗೆ ಆಗ್ರಹ

ದಾವಣಗೆರೆ, ಮೇ 23- ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು. ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದ ನಿಯೋಗವು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ‌ ಮುಖಾಂತರ ಇಂದು ಮನವಿ ಸಲ್ಲಿಸಿತು. 

ಸರ್ಕಾರವು ಎಪಿಎಂ‍ಸಿ ಕಾಯ್ದೆಗೆ  ಮಾಡಿರುವ ತಿದ್ದುಪಡಿಯನ್ನು ಸುಗ್ರೀವಾಜ್ಞೆಯ ಮೂಲಕ ಅನುಷ್ಟಾನಕ್ಕೆ ತಂದು ಕೃಷಿ ಉತ್ಪನ್ನ ಮಾರುಕಟ್ಟೆ ಯನ್ನು ಕಾರ್ಪೋರೇಟ್ ಗಳಿಗೆ ತೆರೆದಿಟ್ಟಿದೆ. ಈ ಕ್ರಮವು ಜನತಂತ್ರ ವಿರೋಧಿಯಾಗಿದೆ. ಸದನದ ಚರ್ಚೆಗೆ ಕಾಯದೆ ಅತ್ಯವಸರದಲ್ಲಿ ಈ ತಿದ್ದುಪಡಿಯನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರದ ಕ್ರಮವು  ರೈತ ವಿರೋಧಿಯಾಗಿದ್ದು, ಮುಂಬರುವ ದಿನಗಳಲ್ಲಿ  ಬಂಡವಾಳಶಾಹಿ ಮಾಲೀಕರು, ಬಹು ರಾಷ್ಟ್ರೀಯ ಕಂಪನಿಗಳು, ಕಾರ್ಪೊರೇಟ್ ಮನೆತನಗಳು ರೈತರ ಆಸ್ತಿಯನ್ನು ಕಬಳಿಸಲು ಈ ತಿದ್ದುಪಡಿಯು ಅವಕಾಶ  ನೀಡುತ್ತದೆ. ಇದು ರೈತರನ್ನು ದಿವಾಳಿ ಮಾಡುತ್ತದೆ. ಮುಂಬರುವ ದಿನಗಳಲ್ಲಿ ಅವರನ್ನು ಆಸ್ತಿ ಪಾಸ್ತಿ ಕಳೆದುಕೊಂಡು ಭೂ ಹೀನ ಕಾರ್ಮಿಕರಾನ್ನಾಗಿ ಮಾಡುತ್ತದೆ ಎಂದು ನೇತೃತ್ವ ವಹಿಸಿದ್ದ ರಾಜ್ಯ ಸಮಿತಿ ಅಧ್ಯಕ್ಷ ಡಾ. ಟಿ.ಎಸ್. ಸುನೀತ್ ಕುಮಾರ್ ಟೀಕಿಸಿದ್ದಾರೆ.

ಇಂತಹ ರೈತ ವಿರೋಧಿ ತಿದ್ದುಪಡಿಯನ್ನು ಸುಗ್ರೀವಾಜ್ಞೆಯ ಮೂಲಕವಾಗಿಯಾದರೂ ಅನುಷ್ಠಾನಕ್ಕೆ ತರಬೇಕೆಂದು ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರವು ಒತ್ತಡ ಹೇರುತ್ತಿದೆ.  ಇದು ಕೇಂದ್ರ ಸರ್ಕಾರದ ರೈತ ವಿರೋಧಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪರ ಧೋರಣೆಗೆ ಹಿಡಿದ ಕನ್ನಡಿಯಾಗಿದೆ ಎಂದು ತಿಳಿಸಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರವು ಕೃಷಿ ಉತ್ಪನ್ನಗಳನ್ನು ವಸ್ತುಶಃ ಬಹುರಾಷ್ಟೀಯ ಕಂಪನಿಗಳ ಮಡಿಲಿಗೆ ಹಾಕಿದೆ. 

ಈ ತಿದ್ದುಪಡಿಯು ಖಾಸಗಿ ವ್ಯಕ್ತಿಗಳು ರೈತ-ಗ್ರಾಹಕ ಮಾರುಕಟ್ಟೆಯನ್ನು ತೆರೆದು ಚಿಲ್ಲರೆ ವ್ಯಾಪಾರಕ್ಕೂ ಅನುವು ಮಾಡಿಕೊಟ್ಟು, ಹೂಡಿಕೆದಾರರು ಹಾಗೂ ಕಾರ್ಪೊರೇಟ್ ಕಂಪನಿಗಳನ್ನು ಕೃಷಿ ಉತ್ವನ್ನ ಮಾರುಕಟ್ಟೆಯಲ್ಲಿ ಸರ್ವಶಕ್ತರನ್ನಾಗಿ ಮಾಡುತ್ತದೆ. ಅದರ ಮೂಲಕ ರೈತರು ಹಾಗೂ ಗ್ರಾಹಕರಿಬ್ಬರ ಹಿತಾಸಕ್ತಿಗಳನ್ನೂ ಬಲಿ ಕೊಡುತ್ತದೆ. 

ದುರಂತವೆಂದರೆ ರೈತರಿಂದ ಚುನಾಯಿತವಾದ ಎಪಿಎಂಸಿಯ ಜಾಗದಲ್ಲಿ ನಾಮ ನಿರ್ದೇಶನ ಹೊಂದಿದವರೇ ಹೆಚ್ಚಾಗಿರುವ ಮಾರುಕಟ್ಟೆ ಸಮಿತಿಗಳನ್ನು ರಚಿಸಲು ಅನುಮತಿ ಕೊಟ್ಟಿರುವುದರಿಂದ ಇದು ರೈತರ ಧ್ವನಿಯನ್ನು ಅಡಗಿಸುತ್ತದೆ. 

ಜೊತೆಗೆ ಎಪಿಎಂಸಿ ಯಾರ್ಡ್‍ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಹಮಾಲಿಗಳಿಗೆ ಯಾವುದೇ ರಕ್ಷಣೆ ಇಲ್ಲದಂತಾಗುತ್ತದೆ. ಅಲ್ಲದೆ ವರ್ತಕರ ತುಳಿತಕ್ಕೆ ನಿಯಂತ್ರಣವಿಲ್ಲದಂತಾಗುತ್ತದೆ ಎಂದು ಜಿಲ್ಲಾ ಸಂಚಾಲಕ ತಿಪ್ಪೇಸ್ವಾಮಿ ಅಣಬೇರು ಹೇಳಿದರು.

ರೈತ ವಿರೋಧಿಯೂ ಹಾಗೂ ಹಮಾಲಿ, ಮತ್ತು ಇತರೆ ಕಾರ್ಮಿಕರ ವಿರೋಧಿಯೂ ಆಗಿರುವ ಈ ತಿದ್ದುಪಡಿಯನ್ನು ಕೈಬಿಟ್ಟು ರೈತರು, ಹಮಾಲರು ಮತ್ತು ಗ್ರಾಹಕರಿಗೆ ಪೂರಕವಾಗಿ ಎಪಿಎಂಸಿಯನ್ನು ಬಲಗೊಳಿಸಬೇಕೆಂದು ಆಗ್ರಹಿಸಿದರು.

error: Content is protected !!