ಕೊಳೆಯುತ್ತಿರುವ ಕುಂಬಳಕಾಯಿ, ಆತ್ಮಹತ್ಯೆಗೆ ಮುಂದಾದ ರೈತ

ಹರಪನಹಳ್ಳಿ, ಮೇ 24- ಲಾಕ್‍ಡೌನ್‍ನಿಂದ ಕುಂಬಳಕಾಯಿಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಹಾಗೂ ಕೊಳ್ಳುವವರು ಇಲ್ಲದೇ ಹೊಲದಲ್ಲೇ ಕೊಳೆಯುತ್ತಿದ್ದು ಲಕ್ಷಾಂತರ ಮೌಲ್ಯದ ನಷ್ಟ ಅನುಭವಿಸಿ ಆತ್ಮಹತ್ಯೆಗೆ ಮುಂದಾಗಿದ್ದ ರೈತನಿಗೆ ರೈತ ಸಂಘದ ಮುಖಂಡರು ಸಂತೈಸಿ ಆತ್ಮಸ್ಥೈರ್ಯ ನೀಡಿದ ಘಟನೆ ಜರುಗಿದೆ. 

ತಾಲ್ಲೂಕಿನ ದುಗ್ಗಾವತಿ ಗ್ರಾಮದ ಸುಮಾರು 20 ಎಕರೆ ಭೂಮಿಯಲ್ಲಿ ಐದಾರು ರೈತರು ಕುಂಬಳ ಬೆಳೆಯನ್ನು ಬೆಳೆದಿದ್ದಾರೆ. ಪ್ರತಿ ಎಕರೆಗೆ 2 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ. ಸಮೃದ್ಧಿಯಾಗಿ ಬೆಳೆದಿದ್ದ ಕುಂಬಳಕಾಯಿಯನ್ನು ಖರೀದಿ ಮಾಡಲು ವ್ಯಾಪಾರಸ್ಥರು ಬಂದಿಲ್ಲ. ದೂರದ ಪಟ್ಟಣಗಳಿಗೆ ಸಾಗಿಸಲು ವಾಹನ ಸೌಕರ್ಯವಿಲ್ಲ, ಹೋಟೆಲ್ ಅಥವಾ ಸಮಾರಂಭಗಳೂ ನಡೆಯುತ್ತಿಲ್ಲ. ಇದರಿಂದ ಖರೀದಿಯಾಗದೇ ಹೊಲದಲ್ಲೇ ಕೊಳೆಯುತ್ತಿದೆ. 

ಕೊಳೆಯುತ್ತಿರುವ ಕುಂಬಳಕಾಯಿ, ಆತ್ಮಹತ್ಯೆಗೆ ಮುಂದಾದ ರೈತ - Janathavaniಮಂಗಳೂರಿನ ಕಾರ್ಖಾನೆಗೂ ಕುಂಬಳಕಾಯಿ ಸರಕಾಗಿತ್ತು. ಆದರೆ ಲಾಕ್‍ಡೌನ್‍ನಿಂದ ಕಾರ್ಖಾನೆಗಳು ಬಂದ್ ಆಗಿವೆ. ಇದರಿಂದ ನಮ್ಮ ಕುಂಬಳಕಾಯಿ ಬಿಕರಿಯಾಗತ್ತಿಲ್ಲ. ಒಂದು ಎಕರೆಯಲ್ಲಿ ಬೆಳೆದ ಕುಂಬಳಕಾಯಿ ಕನಿಷ್ಟ 6 ರಿಂದ 8 ಲಕ್ಷಕ್ಕೆ ಬಿಕರಿಯಾಗುತ್ತಿತು. ಇಂದು ನಯಾಪೈಸೆಗೂ ಯಾರೂ ಕೊಳ್ಳುತ್ತಿಲ್ಲ. ಈ ರೀತಿ ನಷ್ಟವಾದರೆ ಸಾಲಗಾರರು ನೀಡಿದ ಸಾಲಕ್ಕೆ ಬಡ್ಡಿ, ಅಸಲು ಕಟ್ಟುವುದು ಚಿಂತೆಯಾಗಿದೆ ಎಂದು ರೈತರಾದ ಬಲವಂತಪ್ಪ, ಶ್ರೀನಿವಾಸ, ಶಿವನಗೌಡ ಹಾಗೂ ಇತರರು ತಮ್ಮ ಅಳಲನ್ನು ಸುದ್ದಿಗಾರರೊಂದಿಗೆ ತೋಡಿಕೊಂಡರು.

ಹಸಿರು ಸೇನೆ ಹಾಗೂ ಮಹಿಳಾ ಶಕ್ತಿ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ.ಮಹೇಶ್ವರಸ್ವಾಮಿ ಮಾತನಾಡಿ, ಲಾಕ್‌ಡೌನ್ ಪರಿಣಾಮ ಧಾರ್ಮಿಕ ಕ್ಷೇತ್ರಗಳಲ್ಲೂ ಸೇವೆಗಳು ಸ್ಥಗಿತಗೊಂಡಿವೆ. ಅನ್ನ ದಾಸೋಹವೂ ಇಲ್ಲದಾಗಿ ಕುಂಬಳಕಾಯಿಗೆ ಬೇಡಿಕೆ ಇಲ್ಲದಾಗಿದೆ. ಸೂಕ್ತ ಮಾರುಕಟ್ಟೆಯೂ ಇಲ್ಲದೆ ರೈತ ಕಂಗಾಲಾಗಿದ್ದಾನೆ. ಕಂಗಾಲಾಗಿರುವ ಯಾವ ರೈತರೂ ಆತ್ಮಹತ್ಯೆಯ ದಾರಿ ತುಳಿಯುವುದು ಬೇಡ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ನಿಜವಾದ ರೈತ ಫಲಾನುಭವಿಗಳ ಸಂಕಷ್ಟಕ್ಕೆ ಆ ಹಣ ದೊರೆಯು ವಂತಾಗಲಿ. ಕುಂಬಳಕಾಯಿ ಬೆಳೆ ಹಾನಿಗೊಳಗಾದ ರೈತರ ಪ್ರತಿ ಎಕರೆಗೆ 10 ಲಕ್ಷ ಪರಿಹಾರ ಶೀಘ್ರವೇ ಘೋಷಿಸಬೇಕು. ಶಾಸಕರು, ಸಂಬಂಧಪಟ್ಟ ಅಧಿಕಾರಿ ಗಳು ಇಂತಹ ರೈತರ ಗೋಳಿಗೆ ಸ್ಪಂದಿಸಲಿ. ಮತದಾನಕ್ಕಾಗಿ ಮಾತ್ರ ಜನರ ಬಳಿಗೆ ಬರುವ ಜನಪ್ರತಿನಿಧಿಗಳೇ ರೈತರ ಸಂಕಷ್ಟದಲ್ಲಿ ಪಾಲುದಾರರಾಗಿ ಋಣ ತೀರಿಸಿ ಎಂದರು.

error: Content is protected !!