ಹರಿಹರ, ಮೇ 24- ನೀರು ಸಂಗ್ರಹವಾಗುವ ತೊಟ್ಟಿಗಳಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟೆ ಎಂಬ ಹೆಣ್ಣು ಸೊಳ್ಳೆ ಕಡತದಿಂದ ಡೆಂಗ್ಯೂ ಜ್ವರ ಬರುತ್ತದೆ. ಸೊಳ್ಳೆ ಕಚ್ಚಿದ ಆರು ದಿನಗಳ ನಂತರ ಜ್ವರದ ಪ್ರಾಥಮಿಕ ಲಕ್ಷಣಗಳು ತಿಳಿಯುತ್ತವೆ ಎಂದು ಆರೋಗ್ಯ ಕೇಂದ್ರದ ಡಾ. ಶಶಿಕಲಾ ಹೇಳಿದರು.
ತಾಲ್ಲೂಕಿನ ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಡೆಂಗ್ಯೂ ದಿನ ಮತ್ತು ಮಲೇರಿಯಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಡೆಂಗ್ಯೂ ಜ್ವರ ದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮನೆಯಲ್ಲಿ ಹಾಗೂ ಸುತ್ತಲಿನ ಪರಿಸರದಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು.
ಮಳೆಗಾಲ ಆರಂಭವಾಗಿದ್ದು, ಮನೆಯ ಒಳಗೆ ಮತ್ತು ಹೊರಗೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಟ್ಯಾಂಕ್‌ನಲ್ಲಿರುವ ನೀರನ್ನು ವಾರಕೊಮ್ಮೆ ಬದಲಾಯಿ ಸುತ್ತಿರಬೇಕು. ಸೊಳ್ಳೆಗಳ ಕಡಿತದಿಂದ ದೂರವಿರಲು ಸ್ವಯಂ ರಕ್ಷಣಾ ವಿಧಾನ ಅನುಸರಿಸಬೇಕು ಎಂದರು.
ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ ಮಾತನಾಡಿ, ಸೊಳ್ಳೆಗಳು ಕಲುಷಿತ ಚರಂಡಿ ನೀರಿನಲ್ಲಿ ಹುಟ್ಟಿಕೊಳ್ಳುತ್ತವೆ. ಮಳೆಗಾಲ ಪ್ರಾರಂಭ ವಾಗಿದ್ದು, ರಸ್ತೆ, ಗುಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಕಿರಿಯ ಆರೋಗ್ಯ ಸಹಾಯಕ ಡಿ.ಎಸ್. ದೇವೇಂದ್ರಪ್ಪ, ಡಿ.ಎಸ್. ಜಯರಾಂ, ಕಸ್ತೂರಿ ಸಂಗೊಳ್ಳಿ, ಅನ್ನಪೂರ್ಣ, ಸುನೀತಾ, ಸೀಮಾ, ಪ್ರತಿಭಾ, ತೇಜಸ್ವಿನಿ ಶಶಿಕುಮಾರ್, ರಘುಕುಮಾರ್ ಹಾಗೂ ಇತರರಿದ್ದರು.