ಅನ್ನ ದಾಸೋಹಿ ಸತ್ಯನಾರಾಯಣ ಮೂರ್ತಿ ರೆಡ್ಡಿ ಅವರಿಗೆ ಪಂಚಮಸಾಲಿ ಪೀಠದಿಂದ ಸನ್ಮಾನ

ದಾವಣಗೆರೆ, ಮೇ 24- ಕೊರೊನಾ ವೈರಸ್ ಕಾರಣ ಆಗಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರಿಗೆ ದಾನಿಗಳ ನೆರವಿನೊಂದಿಗೆ ಪ್ರತಿದಿನ ಉಚಿತವಾಗಿ ಆಹಾರ ವಿತರಣೆ ಮಾಡಿದ ನಗರದ ಸ್ಫೂರ್ತಿ ಸೇವಾ ಟ್ರಸ್ಟ್ ಸಂಸ್ಥಾಪಕ ಕೆ.ಸತ್ಯನಾರಾಯಣ ಮೂರ್ತಿ ರೆಡ್ಡಿ ಅವರನ್ನು ಹರಿಹರದ ಪಂಚಮಸಾಲಿ ಪೀಠದಿಂದ ಗೌರವಿಸಲಾಯಿತು.

ಜನತಾ ಕರ್ಫ್ಯೂ ಆಗಿದ್ದ ಸುಮಾರು 55 ದಿನಗಳ ಕಾಲ ಪ್ರತಿದಿನವೂ ಸಂಕಷ್ಟಕ್ಕೊಳಗಾದವರಿಗೆ ಕನಿಷ್ಟ 2 ಟನ್ ನಷ್ಟು ಉಚಿತ ಆಹಾರ ನೀಡಿದ ಸತ್ಯನಾರಾಯಣ ಮೂರ್ತಿ ಅವರನ್ನು ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸುವುದರ ಮೂಲಕ ಅವರ ಸಾಮಾಜಿಕ ಸೇವೆಯನ್ನು ಶ್ಲ್ಯಾಘಿಸಿದರು.

ಪಂಚಮಸಾಲಿ ಪೀಠದಲ್ಲಿ ನಡೆದ ಸೌಹಾರ್ದ ಕೂಟದ ಸಂದರ್ಭದಲ್ಲಿ  ಮಾತನಾಡಿದ ಶ್ರೀಗಳು, ಲಾಕ್ ಡೌನ್ ಮಾತ್ರವಲ್ಲದೇ, ವರ್ಷ ಪೂರ್ತಿ ಹಲವೆಡೆ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಉಳಿದ ಹೆಚ್ಚುವರಿ ಅನ್ನವನ್ನು ವ್ಯರ್ಥ ಮಾಡದೇ, ಅಗತ್ಯ ಇರುವವರಿಗೆ ಪೂರೈಸುವ ಕೆಲಸ ಮಾಡುತ್ತಿರುವ ಸತ್ಯನಾರಾಯಣ ಮೂರ್ತಿ ಅವರ ಸೇವೆಯನ್ನು ಮೆಲುಕು ಹಾಕಿ `ಪಬ್ಲಿಕ್ ಹೀರೋ’ ಎಂದು ಬಣ್ಣಿಸಿದರು. ಇವರ ಕಾರ್ಯ ಕ್ಷಮತೆಯು ಯುವಕರಿಗೆ ಮತ್ತು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಲಾಕ್ ಡೌನ್ ಸಂದರ್ಭದಲ್ಲಿ ಸತ್ಯನಾರಾಯಣ ಮೂರ್ತಿ ಅವರ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಸಹಕರಿಸಿದ ಸಂದೀಪ್ ನರ್ಸಿಂಗ್ ಹೋಂ ಮಾಲೀಕ ಡಾ. ಹೆಚ್.ಎನ್.ಮಲ್ಲಿಕಾರ್ಜುನ್ ಮತ್ತು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಾಮ ನೂರಿನ ಹೆಚ್.ಆರ್. ಲಿಂಗರಾಜ್ ಅವರುಗಳನ್ನೂ ಶ್ರೀಗಳು ಶಾಲು ಹೊದಿಸಿ, ಸನ್ಮಾನಿಸಿದರು.

ಅಲ್ಲದೇ, ಧನ ಸಹಾಯ ಮಾಡಿದ ಎಲ್ಲರನ್ನೂ ಸ್ಮರಿಸಿದ ಶ್ರೀಗಳು, ಎಲ್ಲಾ ದಾನಿಗಳನ್ನೂ ಅಭಿನಂದಿಸಿ, ಸ್ಫೂರ್ತಿ ಸೇವಾ ಟ್ರಸ್ಟ್ ನಂತಹ ಸಾಮಾಜಿಕ ಕಾರ್ಯ ಕ್ರಮಗಳಿಗೆ ಧನ ಸಹಾಯ ಮಾಡುವುದರ ಮೂಲಕ ಪ್ರೋತ್ಸಾಹಿಸಬೇಕೆಂದು ದಾನಿಗಳಿಗೆ ಕರೆ ನೀಡಿದರು.

ವಿನಾಯಕ ರೈಸ್ ಮಿಲ್ ಮಾಲೀಕ
ಜಿ. ವೇದಮೂರ್ತಿ, ಅಂಗಡಿ ನಾಗಪ್ಪ, ತಾಳೇರ ರಾಜಣ್ಣ, ಸೇವಾಹಿ ವೆಲ್ ಫೇರ್ ಅಸೋಸಿಯೇಷನ್ ಸಂಸ್ಥಾಪಕರೂ ಆದ ಲೆಕ್ಕ ಪರಿಶೋಧಕ ಜಿ.ಮಾಲತೇಶ್, ನಿರ್ದೇಶಕರುಗಳಾದ ಮಾದೇಗೌಡ ಎಂ. ಆವಟೆ, ಅನಿಲ್ ರಾಯ್ಕರ್, ಪರಶುರಾಮ್, ನಿರಂಜನ್ ಅಣಬೂರು ಮಠ, ಕೆ.ಜೆ. ನಾಗರಾಜ್, ಶ್ರೀಕಾಂತ್ ಬಗರೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!