ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಬದುಕು ಹಸನು

ಜಗಳೂರಿನಲ್ಲಿ ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ಮೇ 24- ಬರಪೀಡಿತ ತಾಲ್ಲೂಕಿನ 57 ಕೆರೆಗಳಿಗೆ  ನೀರು  ತುಂಬಿಸುವ ಯೋಜನೆ ಜಾರಿಗೆ ಬಂದರೆ ರೈತರ  ಬದುಕು ಹಸನಾಗಲಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದರು.

ಇಲ್ಲಿನ ವಾಲ್ಮೀಕಿ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ  ಬಡವರಿಗೆ  ಉಚಿತ ಆಹಾರದ  ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗಳೂರು ಬರಪೀಡಿತ ಹಾಗೂ ಹಿಂದುಳಿದ  ತಾಲ್ಲೂಕು ಎಂಬ ಹಣೆ ಪಟ್ಟಿಯನ್ನು ಹೊತ್ತುಕೊಂಡು ಬಂದಿದೆ. ಸಿರಿಗೆರೆಯ ತರಳಬಾಳು ಶ್ರೀ ಡಾ. ಶಿವಮೂರ್ತಿ ಸ್ವಾಮೀಜಿಯವರ  ಕಾಳಜಿಯಿಂದ  ಕೆರೆ ತುಂಬಿಸುವ ಯೋಜನೆ ಜಾರಿಯಾಗಿದ್ದು, ಕಾಮಗಾರಿ ಕೂಡ  ಭರದಿಂದ ಸಾಗುತ್ತಿದೆ. 2020ರೊಳಗೆ  ನೀರು  ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಪ್ರತಿ ಗ್ರಾಮಗಳಲ್ಲೂ ಮಹಿಳೆಯರ ಸ್ವಸಹಾಯ ಗುಂಪುಗಳನ್ನು ತೆರೆಯುವ ಮೂಲಕ ಸಾಲ ಸೌಲಭ್ಯ ಒದಗಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ ಎಂದರು.

ಬಡವರನ್ನು ಗುರುತಿಸಿ ಅವರಿಗೆ ಅಗತ್ಯ ಆಹಾರದ ಕಿಟ್‍ಗಳನ್ನು ವಿತರಿಸಿ, ಹಸಿವು ಮುಕ್ತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆ ಜಾರಿಯಾದಾಗಿನಿಂದಲೂ ತೆಗೆದುಕೊಂಡ ಸಾಲ ತೀರಿಸಲು ಮಹಿಳೆಯರು, ಪುರುಷರು ದುಡಿಯಲು  ಮುಂದಾಗಿದ್ದು ಸೋಮಾರಿ ತನದಿಂದ  ದೂರಾಗಿದ್ದಾರೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ತಹಶೀಲ್ದಾರ್ ತಿಮ್ಮಣ್ಣ ಹುಲ್ಲುಮನಿ, ಪ.ಪಂ ಸದಸ್ಯರಾದ  ತಿಪ್ಪೇಸ್ವಾಮಿ, ನವೀನ್‍ಕುಮಾರ್, ಓಬಳೇಶ್, ವಿಎಸ್‍ಎಸ್‍ಎನ್ ಅಧ್ಯಕ್ಷ  ಬಿಸ್ತುವಳ್ಳಿ ಬಾಬು,  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಣಕಾರ್,
ಕೃಷಿ ಅಧಿಕಾರಿ ಶಿವಾನಂದ್, ಸಮನ್ವಯಾಧಿಕಾರಿ ಮಮತಾ, ಮೇಲ್ವಿಚಾರಕರಾದ ಮಂಜುಳಾ ಸೇರಿದಂತೆ ಮತ್ತಿತರರಿದ್ದರು. 

error: Content is protected !!