ಹರಿಹರ: ವಾಣಿಜ್ಯ ಚಟುವಟಿಕೆ ಪೂರ್ಣ ಸ್ಥಗಿತ

ಹರಿಹರ, ಮೇ 25- ಲಾಕ್ ಡೌನ್ ಸಡಿಲಿಕೆ ನಂತರ ನಗರದಲ್ಲಿ ಇಂದು ಮತ್ತೆ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿ ಎಲ್ಲಾ ಚಟುವಟಿಕೆ ಗಳನ್ನು ಸ್ಥಗಿತಗೊಳಿಸಿ ಕರ್ಪ್ಯೂಗೆ ಬೆಂಬಲ ನೀಡಿದರು.

ಸರ್ಕಾರದ ಆದೇಶದಂತೆ ಇಂದು ನಗರದಲ್ಲಿ ಅವಶ್ಯಕತೆ ಇರುವುದನ್ನು ಹೊರತುಪಡಿಸಿ ಉಳಿದ ಎಲ್ಲಾ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಬಂದ್ ಮಾಡಿ ಕರ್ಪ್ಯೂಗೆ ಒಳಗಾಗಿದ್ದು ಕಂಡುಬಂದಿತು.

ನಗರದ ಜನನಿಬಿಡ ಪ್ರದೇಶವಾದ ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಹರಪನಹಳ್ಳಿ ರಸ್ತೆ, ಪಿ.ಬಿ. ರಸ್ತೆ, ದೇವಸ್ಥಾನ ರಸ್ತೆ, ಶೋಭಾ ಟಾಕೀಸ್ ರಸ್ತೆ, ತರಕಾರಿ ಮಾರುಕಟ್ಟೆ, ಹೈಸ್ಕೂಲ್ ಬಡಾವಣೆ ಮುಂತಾದ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿರುವುದರಿಂದ ಸಾರ್ವಜನಿಕರ ಓಡಾಟ ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಅವಶ್ಯಕತೆ ಇರುವ ಹಾಲು, ಔಷಧಿ ಅಂಗಡಿ, ಪೆಟ್ರೋಲ್ ಬಂಕ್, ಮಟನ್ , ಚಿಕನ್ ಶಾಪ್  ಇವುಗಳನ್ನು ಹೊರತುಪಡಿಸಿ ಉಳಿದ ಬಟ್ಟೆ, ಹೋಟೆಲ್, ದಲಾಲಿ, ದಿನಸಿ ಪದಾರ್ಥಗಳು, ಗ್ಯಾರೇಜ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವರ್ಕ್ ಶಾಪ್, ಹಾರ್ಡ್‌ವೇರ್, ಬೆಳ್ಳಿ-ಬಂಗಾರ, ಮೊಬೈಲ್, ಪೇಂಟ್, ಸ್ಟೇಷನರಿ, ಗುಜ್ಜರಿ, ಕಾರ್ ಪೇಂಟಿಂಗ್ ವರ್ಕ್ ಶಾಪ್, ಹೂವು, ಮದ್ಯದ ಅಂಗಡಿಗಳು ಸೇರಿದಂತೆ ಆಟೋ, ಟ್ಯಾಕ್ಸಿಗಳು, ಬಸ್ ಸಂಚಾರ, ಕೈಗಾರಿಕೆಗಳು ಎಲ್ಲವೂ ಬಂದ್ ಆಗಿದ್ದವು.

ಮದುವೆಗೆ ಅನುಮತಿ ಇರುವುದರಿಂದ ನಗರದ ಎ.ಕೆ. ಕಾಲೋನಿಯಲ್ಲಿ ಮತ್ತು ಇತರೆ ಕಡೆಗಳಲ್ಲಿ ಕಡಿಮೆ ಬಂಧುಗಳ ಮಧ್ಯದಲ್ಲಿ ಮದುವೆ ಸಮಾರಂಭ ನಡೆದವು. ಕೆಲವೊಂದು ಡಾಬ್ ಗಳಲ್ಲಿ ಊಟವನ್ನು ಪಾರ್ಸೆಲ್ ಕೊಡಲಾಗುತ್ತಿತ್ತು ಉಳಿದಂತೆ ನಗರದಲ್ಲಿ ಶಾಂತಿಯುತವಾಗಿ ಕರ್ಪ್ಯೂಗೆ ಎಲ್ಲಾ ಸಾರ್ವಜ ನಿಕರು ಮತ್ತು ವ್ಯಾಪಾರಸ್ಥರು ಬೆಂಬಲ ನೀಡಿದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆ ಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

error: Content is protected !!