ದಾವಣಗೆರೆ, ಮೇ 24- ಕ್ವಾರಂಟೈನ್ ವದಂತಿ ಹಿನ್ನೆಲೆ ಭಯ ಭೀತರಾದ ಸ್ಥಳೀಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿರುವ ಘಟನೆ ಇಲ್ಲಿನ ಕೆ.ಬಿ. ಬಡಾವಣೆ 1ನೇ ಕ್ರಾಸ್ ನಲ್ಲಿ ಇಂದು ನಡೆದಿದೆ.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮನೆಯ ಪಕ್ಕದಲ್ಲಿಯೇ ಇರುವ ಬಿಸಿಎಂ ಹಾಸ್ಟೆಲ್ ನಲ್ಲಿ ಕೆಲವರನ್ನು ಕ್ವಾರಂಟೈನ್ ಮಾಡುವ ಬಗ್ಗೆ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಬಡಾವಣೆಯ ಶ್ರೀ ಗುಳ್ಳೆಮ್ಮ ದೇವಸ್ಥಾನ ಬಳಿಯ ಮುಖ್ಯರಸ್ತೆಯಲ್ಲಿ ಪುರುಷರಷ್ಟೇ ಅಲ್ಲದೇ ಮಹಿಳೆಯರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಂಜೆ ಈ ಕಟ್ಟಡ ಸ್ವಚ್ಚಗೊಳಿಸಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ರಸ್ತೆಗಿಳಿದು ಹೋರಾಟ ನಡೆಸಿದ್ದಾರೆ.
ಈ ಭಾಗದ ವ್ಯಾಪ್ತಿಯಲ್ಲಿನ ಲಾಡ್ಜ್‌ಗಳಲ್ಲಿ ಈಗಾಗಲೇ ಸಾಕಷ್ಟು ಕ್ವಾರಂಟೈನ್ ಗಳನ್ನು ಮಾಡಲಾಗಿದೆ. ವಸತಿ ಮತ್ತು ಜನ ನಿಬಿಡ ಪ್ರದೇಶವಾದ ಈ ಸ್ಥಳದಲ್ಲೇ ಕ್ವಾರಂಟೈನ್ ಮಾಡುವುದು ಸರಿಯಲ್ಲ ಎಂದು ಪ್ರತಿಭಟನಾ ನಿರತರು ಆಕ್ಷೇಪಿಸಿದರು.
ಈ ಪ್ರದೇಶದಲ್ಲಿ ಕ್ವಾರಂಟೈನ್ ಮಾಡುವುದು ಸೂಕ್ತವಲ್ಲ. ಈ ಪ್ರದೇಶದಲ್ಲಿ ವೃದ್ಧರು, ಮಕ್ಕಳು ಹೆಚ್ಚಾಗಿದ್ದಾರೆ. ಅಲ್ಲದೇ ಇಲ್ಲಿ ವೃದ್ಧಾಶ್ರಮ ಸಹ ಇದೆ. ಇನ್ನು ಬಿಸಿಎಂ ಹಾಸ್ಟೆಲ್‌ನ ಶೌಚಾಲಯ ದುರಸ್ತಿ ಯಲ್ಲಿದ್ದು, ನೀರು ಸೋರಿಕೆಯಾಗುತ್ತಿದೆ ಹಾಗೂ ಕಿಟಕಿಗಳಿಗೆ ಸರಳಿಲ್ಲದೇ ಅಭದ್ರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ವಾರಂಟೈನ್ ಮಾಡುವುದು ಅತ್ಯಂತ ಅಪಾಯಕಾರಿ ಎಂದು ಸ್ಥಳೀಯ ನಾಗರಿಕರ ಪರವಾಗಿ ಸಿ.ಕೆ. ಆನಂದತೀರ್ಥಾಚಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಕ್ವಾರಂಟೈನ್ ಕೇಂದ್ರ ಮಾಡುವ ಬಗ್ಗೆ ಜಿಲ್ಲಾಡಳಿತ ಯಾವುದೇ ಸ್ಪಷ್ಟಪಡಿಸಿಲ್ಲ ಎನ್ನಲಾಗಿದೆ.