ದಾವಣಗೆರೆ ಮತ್ತೆ ಪೂರ್ಣ ಸ್ತಬ್ಧ

ಬೆಳಿಗ್ಗೆ ಮೂರ್ನಾಲ್ಕು ಗಂಟೆಯ ವಹಿವಾಟಿನ ನಂತರ ‘ಜನತಾ ಕರ್ಫ್ಯೂ’ ನೆನಪು

ದಾವಣಗೆರೆ, ಮೇ 24- ಮುಂಜಾನೆಯ ಮೂರ್ನಾಲ್ಕು ಗಂಟೆಗಳನ್ನು ಹೊರತುಪಡಿಸಿದರೆ ಭಾನುವಾರ ದಾವಣಗೆರೆ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಕೊರೊನಾ ನಿಯಂತ್ರಣಕ್ಕಾಗಿ ಆರಂಭದಲ್ಲಿ ಪ್ರಧಾನಿ ಕರೆ ನೀಡಿದ್ದ ಜನತಾ ಕರ್ಫ್ಯೂ ಅನ್ನು ಮತ್ತೆ ನೆನಪಿಸಿತು.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್ ಸಡಿಲಿಕೆ ಮಾಡಿದ್ದವು. ಆದರೆ ರಾಜ್ಯ ಸರ್ಕಾರ ಸಡಿಲಿಕೆ ನಡುವೆಯೂ ಭಾನುವಾರ ಪೂರ್ಣ ಲಾಕ್‌ಡೌನ್‌ ಇರಲಿದೆ ಎಂದು ಘೋಷಿಸಿತ್ತು.

ಈ ಹಿನ್ನೆಲೆಯಲ್ಲಿ ಶನಿವಾರವೇ ಅಗತ್ಯ ವಸ್ತುಗಳನ್ನು ಕೊಂಡುಕೊಂಡಿದ್ದ ನಗರದ ಜನತೆ, ಭಾನುವಾರ ಮುಂಜಾನೆಯೂ ಹಾಲು, ಹಣ್ಣು, ತರಕಾರಿ, ಸೊಪ್ಪು, ಚಿಕನ್, ಮಟನ್ ಮತ್ತಿತರೆ ಅಗತ್ಯ ವಸ್ತುಗಳನ್ನು ಖರೀದಿಸಿದರು. ಅಗತ್ಯ ವಸ್ತುಗಳೆಂದು ಇವುಗಳ ಮಾರಾಟಕ್ಕೂ ಜಿಲ್ಲಾಡಳಿತ ಅನುಮತಿ ನೀಡಿತ್ತು.

ಭಾನುವಾರ ಮುಂಜಾನೆ 9 ಗಂಟೆವರೆಗೂ ಜನಸಂಚಾರ ಮಾಮೂಲಿಯಾಗಿಯೇ ಇತ್ತು. ಆದರೆ ನಂತರ ನಿಧಾನಗತಿ ಪಡೆದು, ಮಧ್ಯಾಹ್ನದ ವೇಳೆಗೆ ನಗರ ಸಂಪೂರ್ಣ ಸ್ತಬ್ಧವಾಗಿತ್ತು.

ದಿನಸಿ, ಹಾಲು, ತರಕಾರಿ, ಹಣ್ಣು , ಔಷಧಿ ಮಾರಾಟಕ್ಕೆ ಅವಕಾಶವಿತ್ತಾದರೂ, ಗ್ರಾಹಕರು ಇಲ್ಲದ ಕಾರಣ ಮಾರಾಟಗಾರರೂ ಅಂಗಡಿಗಳ ಬಾಗಿಲು ಮುಚ್ಚಿಕೊಂಡು ಮನೆಗೆ ತೆರಳಬೇಕಾಯಿತು.

ನಗರದ ಮಂಡಿಪೇಟೆ, ಚೌಕಿಪೇಟೆ, ಅಶೋಕ ರಸ್ತೆ, ಹದಡಿ ರಸ್ತೆ, ಗಡಿಯಾರ ಕಂಬ, ಹೊಂಡದ ವೃತ್ತ, ಜಯದೇವ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳು, ವೃತ್ತಗಳು ಮಧ್ಯಾಹ್ನದಿಂದಲೇ ಬಿಕೋ ಎನ್ನುವಂತಿದ್ದವು. ಸಂಪೂರ್ಣ ಲಾಕ್‌ಡೌನ್‌ ಎಂಬ ವಿಷಯ ತಿಳಿದಿದ್ದ ಸ್ಥಳೀಯರೂ ಸಹ ಮನೆಯಲ್ಲಿಯೇ ಉಳಿದಿದ್ದರು.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಚಿಕನ್, ಮಟನ್ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಮಟನ್ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಮಾತ್ರ ಒಂದಿಷ್ಟು ಜನಸಂದಣಿ ಕಂಡು ಬಂತು. ಬಹುತೇಕ ಮಾಂಸದಂಗಡಿಗಳು ಗ್ರಾಹಕರಿಲ್ಲದೆ ಖಾಲಿ ಇದ್ದವು.

ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಲಾಗಿತ್ತು. ಬೆಳಿಗ್ಗೆ ಸೊಪ್ಪು, ತರಕಾರಿ ಮಾರಾಟಗಾರರ ಸಂಖ್ಯೆಯೂ ವಿರಳವಾಗಿತ್ತು.

ನಾಲ್ಕು ಚಕ್ರದ ಗಾಡಿಗಳ ಮೂಲಕ ಬಡಾವಣೆಗಳಲ್ಲಿ ಸಂಚರಿಸಿ ಮಾರಾಟ ಮಾಡುವವರೂ ಸಹ ಲಾಕ್‌ಡೌನ್‌ ಬೆಂಬಲಿಸಿದಂತೆ ಕಂಡು ಬಂತು. ಬೆರಳೆಣಿಕೆಷ್ಟು ಮಾರಾಟಗಾರರು ಅಲ್ಲಲ್ಲಿ ಕಂಡು ಬಂದರು.

error: Content is protected !!