ವಾಸನ ಗ್ರಾಮಸ್ಥರ ವಿರೋಧದ ನಡುವೆಯೂ ನಂದಿಗುಡಿಯ ಶಾಲೆಯಲ್ಲಿ 13 ಜನರ ಕ್ವಾರಂಟೈನ್‌

ಮಲೇಬೆನ್ನೂರು, ಮೇ 21- ಮಹಾರಾಷ್ಟ್ರದ ಪುಣೆಯಿಂದ ಬಂದಿರುವ 13 ಜನರನ್ನು ನಂದಿಗುಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲು ವಾಸನ ಮತ್ತು ನಂದಿಗುಡಿ ಗ್ರಾಮಸ್ಥರು ವಿರೋಧ ಮಾಡಿದ ಘಟನೆ ನಡೆದಿದೆ.

ಪುಣೆಯಲ್ಲಿ ಒಂದೇ ಕಡೆ ಕೆಲಸ ಮಾಡುತ್ತಿದ್ದರೆನ್ನಲಾದ ಮಲೇಬೆನ್ನೂರಿನ ಮೂವರು, ಕುಂಬಳೂರಿನ ಐವರು, ಹೊಳೆ ಸಿರಿಗೆರೆಯ ಇಬ್ಬರು, ಹಾಲಿವಾಣ, ಷಂಷೀಪುರ ಮತ್ತು ದಾವಣಗೆರೆ ತಾ. ಗೋಪನಾಳ್‌ ಗ್ರಾಮದ ಒಬ್ಬೊಬ್ಬರಂತೆ ಮೂರು ಜನ ಸೇರಿ ಒಟ್ಟು 13 ಜನರನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದಾಗ ಗ್ರಾಮಸ್ಥರು ಬಸ್‌ ತಡೆದು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.

ಆಗ ತಹಶೀಲ್ದಾರ್‌ ರಾಮಚಂದ್ರಪ್ಪ, ಸರ್ಕಲ್‌ ಇನ್ಸ್‌ಪೆಕ್ಟರ್‌ ಶಿವಪ್ರಸಾದ್‌, ಟಿ.ಹೆಚ್‌.ಓ. ಡಾ. ಚಂದ್ರಮೋಹನ್‌ ಅವರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಕ್ವಾರಂಟೈನ್‌ಗೆ ಕರೆದುಕೊಂಡು ಬಂದಿರುವವರಿಗೆ ಕೊರೊನಾ ಸೋಂಕು ಇಲ್ಲ. ಅವರನ್ನು ಆರೋಗ್ಯ ಇಲಾಖೆಯ ಸೂಚನೆಯಂತೆ 14 ದಿನ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡುತ್ತೇವೆ. ಅವರೂ ನಮ್ಮವರೇ ಉದ್ಯೋಗಕ್ಕಾಗಿ ಅಲ್ಲಿಗೆ ಹೋಗಿ ಬಂದಿದ್ದಾರೆ ಎಂದು ಹೇಳಿ ಮನವೊಲಿಸುವ ಪ್ರಯತ್ನ ಮಾಡಿದರು.

ಇದಕ್ಕೆ ಗ್ರಾಮಸ್ಥರು ಒಪ್ಪದಿದ್ದಾಗ ಪೊಲೀಸ್‌ ಭದ್ರತೆಯೊಂದಿಗೆ 13 ಜನರನ್ನು ನಂದಿಗುಡಿ ಮೊರಾರ್ಜಿ ಶಾಲೆಯ 8 ಕೊಠಡಿಗಳಲ್ಲಿ ಕ್ವಾರಂಟೈನ್‌ ಮಾಡಲಾಯಿತು. ಶಾಲೆಗೆ ಪೊಲೀಸರನ್ನು ನಿಯೋಜಿಸಿದ್ದು, 13 ಜನರಿಗೆ ಊಟ, ಇತ್ಯಾದಿ ಸೌಲಭ್ಯ ಒದಗಿಸುವ ಜವಾಬ್ದಾರಿಯನ್ನು ಪಿಡಿಓಗೆ ನೀಡಲಾಗಿದೆ ಎಂದು ಕಂದಾಯ ನಿರೀಕ್ಷಕ ಸಮೀರ್‌ ತಿಳಿಸಿದರು.

ಪಿಎಸ್‌ಐ ಕಿರಣ್‌ಕುಮಾರ್‌ ಮತ್ತು ಅಧಿಕಾರಿಗಳು ಹಾಜರಿದ್ದರು. ಪ್ರತಿಭಟನೆಯಲ್ಲಿ ರೈತ ಸಂಘದ ಓಂಕಾರಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

error: Content is protected !!