ಡೊನೇಷನ್ ವಸೂಲಿ ತಡೆಗೆ ಮನವಿ

ಹರಪನಹಳ್ಳಿ, ಮೇ 17- ರಾಜ್ಯಾದ್ಯಂತ ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳಿಂದ ಡೊನೇಷನ್ ವಸೂಲಿ ಮಾಡುತ್ತಿರುವುದನ್ನು ತಡೆಯುವಂತೆ ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ (ಎನ್.ಎಸ್.ಯು.ಐ.) ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಜೀಷಾನ್ ಮಾತನಾಡಿ, ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ವಿವಿಧ ತೆರನಾದ ಅನೇಕ ವಿನಾಯ್ತಿಗಳನ್ನು ಪಡೆದಿದ್ದರೂ ಕೂಡ ಡೊನೇಷನ್ ವಿಚಾರದಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದ ಶಿಕ್ಷಣ ದಾಸೋಹದ ಪರಿಕಲ್ಪನೆ, ಬಡ ಮತ್ತು ಮಧ್ಯಮ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದರು.

ತಾಲ್ಲೂಕು ಅಧ್ಯಕ್ಷ ಎಂ.ಡಿ. ಶ್ರೀಕಾಂತ್ ಮಾತನಾಡಿ, ಕೊರೊನಾ ವೈರಸ್ ಕಾರಣಕ್ಕೆ ಶಾಲಾ-ಕಾಲೇಜುಗಳು ತಟಸ್ಥಗೊಂಡಿದ್ದರೂ ಕೂಡ, ಶೈಕ್ಷಣಿಕ ವರ್ಷ ಆರಂಭಗೊಂಡಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಪಾಲಕರಿಗೆ ಶಿಕ್ಷಣ ಸಂಸ್ಥೆಗಳು ಫೋನ್ ಕರೆಗಳು, ಮೆಸೇಜ್ ಮೂಲಕ ಡೊನೇಷನ್ ಪೀಡನೆ ಆರಂಭಿಸಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕೂಡಲೇ ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಡೊನೇಷನ್ ಪಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ರಾಜ್ಯ ಸರ್ಕಾರ ನಿಗದಿ ಮಾಡಿದ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಲು ಸ್ಪಷ್ಟ ಆದೇಶ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಸ್. ಸಾಧಿಕ್, ಕಾರ್ಯದರ್ಶಿ ಬಿ. ಮೋಹನ್ ಕುಮಾರ್, ಲಾಟಿ ಅಮೀರ್ ಸೊಹೈಲ್, ಉಪಾಧ್ಯಕ್ಷ ಡಂಕಿ ವಾಸೀಂ, ಸಹಕಾರ್ಯದರ್ಶಿ ದೊರೆ ಗುರುಬಸವರಾಜ ಹಾಗೂ ಹಡಗಲಿ ಅಬುಸಾಲೇಹ್ ಉಪಸ್ಥಿತರಿದ್ದರು.

error: Content is protected !!