ವ್ಯಾಪಾರಕ್ಕೆ ಅನುಮತಿಗಾಗಿ ಬೀದಿ ಬದಿ ಚಿಲ್ಲರೆ ವ್ಯಾಪಾರಸ್ಥರ ಮನವಿ

ದಾವಣಗೆರೆ, ಮೇ 18- ಬೀದಿ ಬದಿ ಚಿಲ್ಲರೆ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅನುಮತಿ ನೀಡಲು ದಾವಣಗೆರೆ ಬೀದಿ ಬದಿ ಚಿಲ್ಲರೆ ವ್ಯಾಪಾರಿಗಳ ಸಂಘ ಹಾಗೂ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಜಂಟಿಯಾಗಿ ಒತ್ತಾಯಿಸಿವೆ.

ನಗರದಲ್ಲಿಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಅವರುಗಳಿಗೆ ಸಂಘಟ ನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ನಗರದಲ್ಲಿ ಬೀದಿ ಬದಿಯಲ್ಲಿ ಚಿಲ್ಲರೆಯಾಗಿ ತರಕಾರಿ, ಹಣ್ಣು ಹಾಗೂ ಚಿಕ್ಕ ಪುಟ್ಟ ಅಂಗಡಿ, ಹೋಟೆಲ್‍ಗಳನ್ನು ನಡೆಸಿ ಜೀವನ ನಡೆಸುವಂತಹ ಸಾವಿರಾರು ಜನರು ಕೆಲಸವಿಲ್ಲದೆ, ದುಡಿಮೆ ಇಲ್ಲದೇ ಎರಡು ಹೊತ್ತಿನ ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ತಿಂಗಳ ಲಾಕ್‍ಡೌನ್ ಪರಿಣಾಮವಾಗಿ ಬೀದಿ ಬದಿ ಚಿಲ್ಲರೇ ವ್ಯಾಪಾರಿಗಳು ಬಹುದೊಡ್ಡ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಮತಿ ನೀಡದೇ ಹೋದರೆ ಸಾವಿರಾರು ಕುಟುಂಬಗಳು ದಿನದ ಆದಾಯವಿಲ್ಲದೇ ಬೀದಿಗೆ ಬರಲಿವೆ ಎಂದು ಬೀದಿ ಬದಿ ವ್ಯಾಪಾರಸ್ಥರು ಅಳಲಿಟ್ಟರು.

ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿ ವರ್ಷ ಲಕ್ಷಾಂತರ ರೂಗಳನ್ನು ತೆರಿಗೆ ಪಡೆದಿದ್ದು, ಆ ಹಣದೊಂದಿಗೆ ಜಿಲ್ಲಾಡಳಿತ ಮತ್ತು ನಗರ ಪಾಲಿಕೆಯಿಂದ ಹಣ ಸೇರಿಸಿ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಗುರುತಿನ ಚೀಟಿಯುಳ್ಳ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಕನಿಷ್ಠ ಮಾಸಿಕ 10 ಸಾವಿರ ಎರಡು ತಿಂಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್ ಯುಸಿಐ ಮಂಜುನಾಥ ಕುಕ್ಕುವಾಡ, ಭಾರತಿ, ಬೀದಿ ಬದಿ ಚಿಲ್ಲರೆ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ರಾಮಪ್ಪ, ಕಾರ್ಯದರ್ಶಿ ಇಸ್ಮಾಯಿಲ್, ಖಜಾಂಚಿ ಈರಣ್ಣ, ಎಸ್. ದುಗ್ಗಪ್ಪ, ಆಂಜಿನಪ್ಪ, ಮಲ್ಲಪ್ಪ, ಬಿ. ಪ್ರಕಾಶ್, ಕುಮಾರ್, ಎಸ್.ಎಂ. ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.

error: Content is protected !!