ರೈತರಿಗೆ ತೊಂದರೆಯಾಗದಂತೆ ನಿಗಾವಹಿಸಿ

ಹರಿಹರ, ಮೇ 18- ತಾಲ್ಲೂಕಿನಲ್ಲಿ ರೈತರಿಗಾಗಲೀ, ಜನರಿಗಾಗಲೀ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ತಾಲ್ಲೂಕಿನ ಎಲ್ಲ ಅಧಿಕಾರಿಗಳಿಗೆ ಶಾಸಕ ಎಸ್.ರಾಮಪ್ಪ ನಿರ್ದೇಶನ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಮುಂಗಾರು ಮಳೆಯ (ಬೆಳೆಯ) ಹಾಗೂ ಕೋವಿಡ್-19ಗೆ ಸಂಬಂಧಿಸಿದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಬಾರಿ ಬೆಳೆ ನಷ್ಟ ಅನುಭವಿಸಿದ ಫಲಾನುಭವಿಗಳಿಗೆ ಇನ್ನೂ ಪರಿಹಾರ ಏಕೆ ಸಿಕ್ಕಿಲ್ಲ ಎಂದು ಕೃಷಿ ಅಧಿಕಾರಿಗೆ ಪ್ರಶ್ನಿಸಿದರು.
ಕೃಷಿ ಅಧಿಕಾರಿ ಬಿ.ಪಿ.ಗೋವರ್ಧನ್ ಮಾತನಾಡಿ, ಈ ಬಾರಿ ಮಳೆ ಉತ್ತಮವಾಗಿದೆ. ಈಗ ಭತ್ತ ಕಟಾವ್‍ಗೆ ಬಂದಿದೆ.  ಮಳೆ ಬಂದ ಕಾರಣ 12 ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರಿಗೆ ನಷ್ಟವಾಗಿದೆ. ನಷ್ಟ ಅನುಭವಿಸಿದ ರೈತರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಪಟ್ಟಿಯನ್ನು ತಹಸೀಲ್ದಾರ್‍ಗೆ ತಲುಪಿಸಲಾಗುವುದು  ಎಂದರು. ರೈತರಿಗೆ ಯಾವುದೇ ತೊಂದರೆಯಾಗದಂತೆ ಬೀಜ, ರಸಗೊಬ್ಬರ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ರೇಖಾ ಮಾತನಾಡಿ, ಹೂ ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಹೆಕ್ಟೇರ್‍ಗೆ 25,000 ರೂ. ಪರಿಹಾರ ನೀಡಲು ಸರ್ಕಾರದ ಆದೇಶ ಬಂದಿದೆ. ಫಲಾನುಭವಿಗಳ ಪಟ್ಟಿ ಸಿದ್ಧ ಮಾಡಲಾಗುತ್ತಿದೆ ಎಂದರು.

ಲೇಬರ್ ಇನ್‌ಸ್ಪೆಕ್ಟರ್ ಮಮತಾ ಮಾತನಾಡಿ, 10,545 ಕಟ್ಟಡ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಈಗಾಗಲೇ 5,000 ಜನರ ಖಾತೆಗೆ 5,000 ರೂ. ಹಾಕಲಾಗಿದೆ. ಇನ್ನುಳಿದವರಿಗೆ ಇಷ್ಟರಲ್ಲಿಯೇ ಹಾಕಲಾಗುವುದು. ರಿಜಿಸ್ಟರ್ ಆದವರಿಗೆ ಮಾತ್ರ ಪರಿಹಾರ ವಿತರಿಸಲಾಗುವುದು ಎಂದರು.
ಹೊರ ರಾಜ್ಯಕ್ಕೆ ಹೋಗುವ ವಲಸೆ ಕಾರ್ಮಿ ಕರಿಗೆ ಹೋಗಲು ಎಲ್ಲಾ ವ್ಯವಸ್ಥೆಯನ್ನು ದಾವಣ ಗೆರೆ ಕೆಎಸ್‍ಆರ್‍ಟಿಸಿಯಲ್ಲಿ ಮಾಡಲಾಗುತ್ತಿದೆ. ಆನ್‍ಲೈನ್‌ನಲ್ಲಿ ನೋಂದಾಯಿಸಿದವರಿಗೆ ಮೇ 21ರಂದು ಹೋಗಲು ಬಸ್ ವ್ಯವಸ್ಥೆ ಮಾಡಲಾ ಗಿದೆ ಎಂದರು. ಹೊರರಾಜ್ಯದಿಂದ ಬರುವ ಎಲ್ಲರಿಗೂ ಕ್ವಾರಂಟೈನ್ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಲಾಗಿದೆ ಎಂದು ವಿವರಿಸಿದರು.
ಡಿಹೆಚ್‍ಒ ಚಂದ್ರಮೋಹನ್ ಮಾತನಾಡಿ, ಬೇರೆ ರಾಜ್ಯಗಳಿಂದ 198 ಜನರು ಬಂದಿದ್ದರು. ಬೇರೆ ಜಿಲ್ಲೆಗಳಿಂದ 4,275 ಜನ ಬಂದಿದ್ದರು. ಅವರಿಗೆಲ್ಲಾ ಕ್ವಾರಂಟೈನ್ ವ್ಯವಸ್ಥೆ ಮಾಡಿ ಆರೋಗ್ಯ ತಪಾಸಣೆ ಮಾಡಿ ಕಳಿಸಲಾಗಿದೆ ಎಂದರು.
ಪಿಡಬ್ಲ್ಯುಡಿ ಇಲಾಖೆಯ ದಳವಾಯಿ ಅವರು ತಮ್ಮ ಇಲಾಖೆಯಿಂದ ಮಾಡಿರುವ ಎಲ್ಲಾ ಮಾಹಿತಿಯನ್ನು ಹಂಚಿಕೊಂಡರು.
ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಮೇಶ್ವರಪ್ಪ ಮಾತನಾಡಿದರು.
ತಹಸೀಲ್ದಾರ್ ರಾಮಚಂದ್ರಪ್ಪ, ತಾ.ಪಂ.ಇಒ ಲಕ್ಷ್ಮಿಪತಿ, ಪೌರಾಯುಕ್ತರಾದ ಎಸ್.ಲಕ್ಷ್ಮಿ ಮತ್ತಿತರೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

error: Content is protected !!