ಜಗಳೂರು, ಮೇ 17- ತಾಲ್ಲೂಕಿನ ಹಳ್ಳಕೊಳ್ಳಗಳು, ಕೆರೆಕಟ್ಟೆಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದ್ದು, ಕಡಿವಾಣ ಹಾಕುವವರೇ ಇಲ್ಲದಂತಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶಿಲ್ದಾರ್
ಅವರಿಗೆ ಮನವಿ ಸಲ್ಲಿಸಿದರು.
ಗಡಿಮಾಕುಂಟೆ ಕೆರೆ, ಗೌರೀಪುರ, ಚಿಕ್ಕಬಂಟ ನಹಳ್ಳಿ, ದೊಣೆಹಳ್ಳಿ ಹಾಗೂ ಕಲ್ಲೇದೇವರಪುರದ ಜಿನಿಗಿ ಹಳ್ಳ ಹಾಗೂ ಅರಣ್ಯ ಪ್ರದೇಶದ ವ್ಯಾಪ್ತಿ ಯಲ್ಲಿ ಪ್ರತಿ ರಾತ್ರಿ ಮರಳು ಸಾಗಾಣಿಕೆ ನಡೆಯುತ್ತಿದೆ.
ಲಾರಿಗಳು ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಮರಳನ್ನು ಹೊರ ಜಿಲ್ಲೆಗಳಿಗೆ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪೊಲೀಸ್, ಕಂದಾಯ ಹಾಗೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಮರಳು ಲೂಟಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವ್ಯಾಪಕ ಅಕ್ರಮ ಮರಳು ದಂಧೆ ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಮನವಿ ಮಾಡಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ವೈ. ಮಹಾಂತೇಶ್, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಶಂಭುಲಿಂಗಪ್ಪ, ವಕೀಲರಾದ ಆರ್. ಓಬಳೇಶ್ ಸುರೇಶ್ ಸಂಗೊಳ್ಳಿ, ಎಸ್.ಟಿ. ವಾಣಿ, ರಖೀಬ್, ನವೀನ್‌ಕುಮಾರ್ ನೇತೃತ್ವ ವಹಿಸಿದ್ದರು.
January 23, 2025