ದಾವಣಗೆರೆ, ಮೇ 17- ಕೊರೊನಾ ಸೋಂಕು ಭೀತಿಯಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಪ್ರಸ್ತುತ ದಿನಗಳಲ್ಲಿ ದೇಶದ ಆರ್ಥಿಕತೆ ಕುಸಿದಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ ನಿಜ. ಆದರೆ ಈಗ ಜನರಿಗೆ ಬೇಕಾಗಿರುವುದು ಎರಡೊತ್ತಿನ ಗಂಜಿಯೇ ಹೊರತು, ಪ್ಯಾಕೇಜ್ ಅಲ್ಲ ಎಂದು ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಸೈಯದ್ ಸೈಫುಲ್ಲಾ ಹೇಳಿದರು.
ಮುಸ್ಲಿಂ ಹಾಸ್ಟೆಲ್ ಸಭಾಂಗಣದಲ್ಲಿ ಇಂದು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಸಾಮಾಜಿಕ ಮಾಧ್ಯಮದಲ್ಲಿ ಕಿಡಿಗೇಡಿಗಳು ಹಾಕಿರುವ ದೃಶ್ಯಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ನಾವೆಲ್ಲರೂ ಸಹೋದರತ್ವದಿಂದ ಜೀವನ ಸಾಗಿಸುತ್ತಿದ್ದೇವೆ. ಮುಂದೆಯೂ ಸಹ ಭಾವೈಕ್ಯತೆಯಿಂದ ಬಾಳುತ್ತೇವೆ ಎಂದು ಹೇಳಿದರು.
ಮಾಜಿ ಅಧ್ಯಕ್ಷ ಸಾಧಿಕ್ ಪೈಲ್ವಾನ್ ಮಾತನಾಡಿ, ಕೊರೊನಾ ಸೋಂಕಿನಿಂದ ಇಡೀ ದೇಶಕ್ಕೇ ಗಂಡಾಂತರ ಬಂದಿದೆ. ಇಂತಹ ಸಂದರ್ಭದಲ್ಲಿ ಹೊಸ ಬಟ್ಟೆ ಧರಿಸಿಕೊಂಡು ಮೋಜು ಮಸ್ತಿ ಮಾಡುವುದು ಬೇಡ. ಮಸೀದಿಗಳಲ್ಲಿ ಪ್ರಾರ್ಥನೆ ಇಲ್ಲ, ದರ್ಗಾಗಳು ಬಾಗಿಲು ತೆರೆದಿಲ್ಲ, ಮದರಸಾಗಳಲ್ಲಿ ಮಕ್ಕಳಿಗೆ ಬೋಧನೆಗಳು ನಡೆಯುತ್ತಿಲ್ಲ. ಹಾಗಾಗಿ ಮುಸ್ಲಿಂ ಸಮಾಜ ಬಾಂಧವರ ಸ್ವಯಂಪ್ರೇರಿತ ನಿರ್ಣಯವನ್ನು ಅವಲೋಕಿಸಿ ತಂಜೀಮ್ ಸಮಿತಿ ತೆಗೆದುಕೊಂಡ ನಿರ್ಣಯಕ್ಕೆ ಕೆಲವು ಕಿಡಿಗೇಡಿಗಳು ರೂಪ ನೀಡಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ, ಇದಕ್ಕೆ ಯಾರೂ ಕಿವಿಗೊಡಬಾರದು ಎಂದು ಕರೆ ನೀಡಿದರು.
ಮಾಜಿ ಪ್ರಧಾನ ಕಾರ್ಯದರ್ಶಿ ರಜವಿ ಖಾನ್ ಅವರು ಮಾತನಾಡಿ, ಶಾಪಿಂಗ್, ಹೊಸ ಬಟ್ಟೆ ಖರೀದಿ ಬೇಡ ಎಂದು ಸಮಾಜದ ನಿರ್ಣಯಕ್ಕೆ ಎಲ್ಲರೂ ಸಹಕರಿಸುತ್ತಿದ್ದಾರೆ. ಸರಳ ರಂಜಾನ್ ಆಚರಣೆಗೆ ತೀರ್ಮಾನಿಸಿದ್ದಾರೆ ಎಂದು ರಜ್ವಿ ಖಾನ್ ಹೇಳಿದರು.
ಮಾಜಿ ಸದಸ್ಯ ಅನೀಸ್‌ಪಾಷಾ ಮಾತನಾಡಿ, ಬಡವರು ಊಟಕ್ಕಾಗಿ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಡವರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಹಂಚಲು ನಾವೆಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು. ಕಚೇರಿ ಮಾಜಿ ಕಾರ್ಯದರ್ಶಿ ಡಿ. ಸೈಯದ್ ರಿಯಾಜ್, ಸಮಾಜ ಸೇವಕರಾದ ಸಾಜಿದ್, ಕೆ.ಹೆಚ್. ಶಂಶುದ್ಧೀನ್, ಆರೀಫ್ ಪೈಲ್ವಾನ್, ಕೋಳಿ ಇಬ್ರಾಹಿಂ ಅವರುಗಳು ಉಪಸ್ಥಿತರಿದ್ದರು.
January 25, 2025