ಮಲೇಬೆನ್ನೂರು, ಮೇ 16- ಪಟ್ಟಣದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿ ವ್ಯಾಪಾರ – ವಹಿವಾಟುಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಸಮಯ ನಿಗದಿ ಮಾಡಿರುವ ಪುರಸಭೆ ಈ ಕುರಿತು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸಿ ಬಂದವರ ಜೊತೆ ಮಾತ್ರ ವ್ಯಾಪಾರ ಮಾಡುವಂತೆ ಸೂಚಿಸಿರುವ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಅವರು, ಸೂಚನೆಗಳನ್ನು ಪಾಲಿಸದವರಿಗೆ ಒಂದೆರಡು ಬಾರಿ ಎಚ್ಚರಿಕೆ ನೀಡಿ ನಂತರ ಸೀಜ್ ಮಾಡಲಾಗುವುದೆಂದು ವ್ಯಾಪಾರಿಗಳಿಗೆ ತಿಳಿಸಿದ್ದಾರೆ.
ದಿನವಿಡೀ ವ್ಯಾಪಾರಕ್ಕೆ ಸಮ್ಮತಿ ಸಿಕ್ಕಿದ್ದರೂ ಶನಿವಾರ ಮಧ್ಯಾಹ್ನದ ನಂತರ ಅಂಗಡಿಗಳು ಓಪನ್ ಇದ್ದರೂ ಜನರ ಓಡಾಟ ಬಹಳ ಕಡಿಮೆ ಇತ್ತು. ವ್ಯಾಪಾರಕ್ಕೆ ಈ ಹಿಂದೆ ನಿಗದಿ ಮಾಡಿದ್ದ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗಿನ ಸಮಯಕ್ಕೆ ಜನ ಹಾಗೂ ವ್ಯಾಪಾರಿಗಳು ಹೊಂದಿಕೊಂಡಿದ್ದರು. ಸಮಯ ವಿಸ್ತರಣೆ ಮಾಡಿದರೂ ಜನ ಮಾತ್ರ ಮಧ್ಯಾಹ್ನದ ನಂತರ ಹೊರಗೆ ಬರುತ್ತಿಲ್ಲ. ಇದಕ್ಕೆ ಬಿಸಿಲು ಒಂದು ಕಾರಣ ಎಂದು ಹೇಳಲಾಗುತ್ತಿದೆ.
ಜಾಗೃತಿ : ಮಾರಕ ಕೊರೊನಾ ಸೋಂಕು ಹರಡದಂತೆ ಸರ್ಕಾರ ಜಾರಿಗೊಳಿಸಿದ ನಿಬಂಧನೆ ಹಾಗೂ ಸೂಚನೆಗಳನ್ನು ಪಾಲನೆ ಮಾಡಿರುವ ಜನರು ಈಗಾಗಲೇ ಸಾಕಷ್ಟು ಜಾಗೃತಿ ಆಗಿದ್ದು, ಕೊರೊನಾ ವಿರುದ್ಧ ಸದಾ ಹೋರಾಟ ಮಾಡುತ್ತಾ ಜೀವನ ಸಾಗಿಸಲು ಸಜ್ಜಾಗಿದ್ದಾರೆ.
ಖರೀದಿ ಬೇಡ : ರಂಜಾನ್ ಹಬ್ಬದ ಪ್ರಯುಕ್ತ ಯಾರೂ ಬಟ್ಟೆ ಅಂಗಡಿಗಳಿಗೆ ಹೋಗಿ ಬಟ್ಟೆ ಖರೀದಿಸಬಾರದು ಎಂದು ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ನಿತ್ಯ ತಿಳಿಸುತ್ತಿದ್ದಾರೆ. ಮಲೇಬೆನ್ನೂರಿನಲ್ಲಿ ಇದುವರೆಗೂ ಕೊರೊನಾ ಕೇಸ್ ಇಲ್ಲ. ಬಟ್ಟೆ ಇನ್ನಿತರೆ ಸಾಮಾನು ಖರೀದಿಗಾಗಿ ಹೊರಗಡೆ ಹೋಗಿ ಬರುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ವರ್ಷ ಹೊಸ ಬಟ್ಟೆ ಖರೀದಿಸದೆ ಸರಳವಾಗಿ ರಂಜಾನ್ ಆಚರಿಸೋಣ. ಬಟ್ಟೆ ಖರೀದಿಸುವ ಹಣವನ್ನು ಬಡವರಿಗೆ ದಾನ ಮಾಡೋಣ ಎಂದು ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ.
ಬ್ಯಾರಿಕೇಡ್ : ಪುರಸಭೆ ಕಛೇರಿಯಲ್ಲಿ ವಿವಿಧ ಸೇವೆಗಳನ್ನು ಆರಂಭಿಸಿದ್ದು, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ಬ್ಯಾರಿಕೇಡ್ ಹಾಕಲಾಗಿದೆ.
December 23, 2024