ಮಲೇಬೆನ್ನೂರಿನಲ್ಲಿ ದಿನವಿಡೀ ವ್ಯಾಪಾರಕ್ಕೆ ಅನುಮತಿ ನೀಡುವ ನಿರ್ಧಾರ ಪುರಸಭೆಗೆ

ಹರಿಹರದಲ್ಲಿ ಖರೀದಿ ಕೇಂದ್ರ ಚಾಲ್ತಿಯಲ್ಲಿದೆ : ತಹಶೀಲ್ದಾರ್‌ ರಾಮಚಂದ್ರಪ್ಪ
ಮಲೇಬೆನ್ನೂರು, ಮೇ 15- ಪಟ್ಟಣದಲ್ಲಿ ಕಟ್ಟಿಂಗ್‌ ಷಾಪ್‌, ಜಿಮ್‌, ಸಿನಿಮಾ ಟಾಕೀಸ್‌, ಕಲ್ಯಾಣ ಮಂಟಪ, ಬ್ಯೂಟಿ ಪಾರ್ಲರ್‌ ಹೊರತುಪಡಿಸಿ ಉಳಿದ ಎಲ್ಲಾ ವ್ಯಾಪಾರ ವಹಿವಾಟು ನಡೆಸುವ ಸಮಯವನ್ನು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ನಿಗದಿಪಡಿಸುವ ನಿರ್ಧಾ ರವನ್ನು ಪುರಸಭೆ ಸದಸ್ಯರು ಕೈಗೊಳ್ಳಲಿದ್ದಾರೆ ಎಂದು ಶಾಸಕ ಎಸ್‌. ರಾಮಪ್ಪ ಹೇಳಿದರು.

ಇಲ್ಲಿನ ಪುರಸಭೆಯ ಕೌನ್ಸಿಲ್‌ ಸಭಾಂಗಣ ದಲ್ಲಿ ಕೋವಿಡ್‌-19 ಅಂಗವಾಗಿ ನಿನ್ನೆ ಕರೆದಿದ್ದ ತುರ್ತು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ಪಟ್ಟಣದ ಜನರ ಹಾಗೂ ವರ್ತಕರ ಹಿತ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಕೊರೊನಾ ಲಾಕ್‌ಡೌನ್‌ ಅನ್ನು ಮಲೇಬೆನ್ನೂರು ಪುರಸಭೆಯವರು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲೆಗೆ ಮಾದರಿ ಯಾಗಿದ್ದಾರೆ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಇದುವರೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಆದರೀಗ ದಾವಣಗೆರೆ ಮತ್ತು ಹರಿಹರದಲ್ಲಿ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಮಲೇಬೆನ್ನೂರಿನಲ್ಲಿ ಇದೇ ರೀತಿ ಮಾಡಿದರೆ ಜನರಿಗೆ ಮತ್ತು ವರ್ತಕರಿಗೆ ಅನುಕೂಲವಾಗಲಿದೆ ಎಂಬ ಸಲಹೆ ನೀಡಿದರು.

ಆಗ ಪುರಸಭೆ ಸದಸ್ಯರಾದ ಯುಸೂಫ್‌, ಸುಬ್ಬಿ ರಾಜಪ್ಪ, ಬಿ. ಸುರೇಶ್‌, ಎ. ಆರೀಫ್‌ ಅಲಿ ಅವರು, ಕೊರೊನಾ ವೈರಸ್‌ ಹರಡದಂತೆ ನೋಡಿಕೊಳ್ಳಬೇಕಾದರೆ ರಂಜಾನ್‌ ಹಬ್ಬ ಮುಗಿ ಯುವವರೆಗೂ ಇದೇ ರೀತಿಯ ಲಾಕ್‌ಡೌನ್‌ ಇರಲಿ, ನಂತರ ಹೊಸ ವೇಳಾಪಟ್ಟಿಯನ್ನು ಮಾಡೋಣ ಎಂದು ಮನವಿ ಮಾಡಿದರು.

ಖರೀದಿ ಕೇಂದ್ರ : ಭತ್ತ, ಮೆಕ್ಕೆಜೋಳ, ರಾಗಿ ಖರೀದಿ ಕೇಂದ್ರ ಚಾಲ್ತಿಯಲ್ಲಿದ್ದು, ಆಸಕ್ತ ರೈತರು ಹರಿಹರ ಎಪಿಎಂಸಿಯಲ್ಲಿ ಮೊದಲು ಹೆಸರು ನೋಂದಾಯಿಸಿ, ನಂತರ ತಮ್ಮ ಬೆಳೆಗಳನ್ನು ಖರೀದಿಗೆ ತರಬೇಕೆಂದು ತಹಶೀಲ್ದಾರ್‌ ರಾಮಚಂದ್ರಪ್ಪ ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್‌ ಅವರು, ಕೊರೊನಾ ವಿಷಯವಾಗಿ ಇದುವರೆಗೂ ಕೈಗೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿದರು.

ಉಪ ತಹಶೀಲ್ದಾರ್‌ ರವಿ, ಎಪಿಎಂಸಿ ಸದಸ್ಯ ಜಿ. ಮಂಜುನಾಥ ಪಟೇಲ್‌, ಪುರಸಭೆ ಸದಸ್ಯರಾದ ದಾದಾವಲಿ, ಮಾಸಣಗಿ ಶೇಖರಪ್ಪ, ಲತೀಫ್‌ ಸಾಬ್‌, ಮಹಾಲಿಂಗಪ್ಪ, ಎಂ.ಬಿ. ಫೈಜು, ಜಿಯಾವುಲ್ಲಾ, ಕೆ.ಜಿ. ಲೋಕೇಶ್‌, ಭೋವಿಕುಮಾರ್‌, ಫಕೃದ್ಧೀನ್‌, ಮುಖಂಡರಾದ ಬಿ. ವೀರಯ್ಯ, ಕೆ.ಜಿ. ಮಂಜುನಾಥ್, ಪುರಸಭೆ ಅಧಿಕಾರಿಗಳಾದ ಸುರೇಶ್‌, ಗಣೇಶ್‌, ದಿನಕರ್‌, ಗುರುಪ್ರಸಾದ್‌, ನವೀನ್‌, ಕಂದಾಯ ನಿರೀಕ್ಷಕ ಸಮೀರ್‌ ಮತ್ತು ಪಿ.ಹೆಚ್‌. ಶಿವಕುಮಾರ್‌ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!