ತುರ್ತುಸಭೆಯಲ್ಲಿ ಪುರಸಭೆ ಸದಸ್ಯರ, ಅಧಿಕಾರಿಗಳ ಸಂಕಲ್ಪ
ಮಲೇಬೆನ್ನೂರು, ಮೇ 4- ಎಲ್ಲರ ಸಹಕಾರದಿಂದಾಗಿ ಪಟ್ಟಣದಲ್ಲಿ ಇದುವರೆಗೆ ಕೊರೊನಾ ಶಂಕಿತ ಅಥವಾ ಸೋಂಕಿತ ಕೇಸ್ ಪತ್ತೆಯಾಗಿಲ್ಲ. ಆದರೀಗ ಪಟ್ಟಣಕ್ಕೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ನಾವೆಲ್ಲರೂ ಬಹಳ ಎಚ್ಚರ ವಹಿಸಬೇಕಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಹೇಳಿದರು.
ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಕೋವಿಡ್-19ರ ಅಂಗವಾಗಿ ಕರೆದಿದ್ದ ಪುರಸಭೆ ಸದಸ್ಯರ ಹಾಗೂ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾವಣಗೆರೆ ನಗರದಲ್ಲಿ ಕೊರೊನಾ ಕೇಸ್ ಹೆಚ್ಚಾಗು ತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಪುರಸಭೆ, ಪೊಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ. ಜನರು ಜಾಗೃತರಾಗದ ಹೊರತು ನಮ್ಮ ಕ್ರಮಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರುವುದಿಲ್ಲ ಎಂದರು.
ಪಟ್ಟಣದಲ್ಲಿ ಬಂಗಾರದ ಅಂಗಡಿ, ಕಟಿಂಗ್ ಶಾಪ್, ಬಟ್ಟೆ ಅಂಗಡಿ, ಪಾತ್ರೆ ಅಂಗಡಿ, ಬೀದಿ ಬದಿಯ ತಿಂಡಿ ಅಂಗಡಿಗಳ ಓಪನ್ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಗತ್ಯ ವ್ಯಾಪಾರ-ವಹಿವಾಟುಗಳಿಗೆ ಈ ಹಿಂದೆ ನಿಗದಿ ಮಾಡಿರುವಂತೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಅವಕಾಶವಿರುತ್ತದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಹೊರಗಿನಿಂದ ಬರುತ್ತಿರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಅವರ ಆರೋಗ್ಯ ತಪಾಸಣೆಯನ್ನು ದಾವಣಗೆರೆ ಸಿ.ಜಿ ಆಸ್ಪತ್ರೆಯಲ್ಲಿ ಮಾಡಲಾಗುವುದು. ಇಲ್ಲಿನ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಜ್ವರ, ಸೀತ, ಕೆಮ್ಮು ಚಿಕಿತ್ಸೆಗಾಗಿ ಬರುವ ರೋಗಿಗಳ ಬಗ್ಗೆ ನಮಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಉಪ ತಹಶೀಲ್ದಾರ್ ರವಿಕುಮಾರ್ ಮಾತನಾಡಿ, ದಾವಣಗೆರೆಯಿಂದ ಪ್ರತಿನಿತ್ಯ ತರಕಾರಿ ಸೇರಿದಂತೆ, ಇತರೆ ಸಾಮಾನುಗಳನ್ನು ತಂದು ವ್ಯಾಪಾರ ಮಾಡುವ ವ್ಯಾಪಾರಸ್ಥರು ಇನ್ನಿಲ್ಲದ ಎಚ್ಚರ ವಹಿಸಬೇಕಿದೆ ಎಂದರು.
ಪಿಎಸ್‌ಐ ಕಿರಣ್‌ಕುಮಾರ್ 144 ಸೆಕ್ಷನ್ ಜಾರಿಯ ಲ್ಲಿರುವುದರಿಂದ ಯಾರೂ ಕಾನೂನು ಉಲ್ಲಂಘನೆ ಮಾಡಬೇಡಿ. ಪಟ್ಟಣದ ಹಿತದೃಷ್ಟಿಯಿಂದ ಹೊರಗಿನಿಂದ ಯಾರೇ ಬಂದರೂ ಮಾಹಿತಿ ನೀಡಿ ಎಂದರು.
ಪಟ್ಟಣದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಬೇಡ ಎಂದು ಒತ್ತಾಯಿಸಿದ ಪುರಸಭೆ ಸದಸ್ಯರು ಈ ಬಗ್ಗೆ ನಿರ್ಣಯವನ್ನು ಡಿಸಿ ಗಮನಕ್ಕೆ ತನ್ನಿ ಎಂದರಲ್ಲದೇ, ಮದ್ಯ ಮಾರಾಟಕ್ಕೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಸಮಯ ನಿಗದಿ ಮಾಡಿ ಎಂದು ಆಗ್ರಹಿಸಿದಾಗ ಸಿಓ ಈ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ, ತಿಳಿಸುತ್ತೇನೆಂದರು.
ಪುರಸಭೆ ಸದಸ್ಯರಾದ ಎ. ಆರೀಫ್ ಅಲಿ, ಯೂಸುಫ್, ಬಿ. ಸುರೇಶ್, ಬರ್ಕತ್ ಅಲಿ, ದಾದಾವಲಿ, ಮಾಸಣಗಿ ಶೇಖರಪ್ಪ, ಸುಬ್ಬಿ ರಾಜಪ್ಪ, ಮಹಾಲಿಂಗಪ್ಪ, ಮಹಾಂತೇಶ್ ಸ್ವಾಮಿ, ಕೆ.ಜಿ. ಲೋಕೇಶ್, ಎಂ.ಬಿ. ಫೈಜು, ಪ್ರಕಾಶ್‌ಚಾರ್, ಭೋವಿಕುಮಾರ್, ಫಕೃದ್ದೀನ್, ಆದಾಪುರ ವಿಜಯಕುಮಾರ್, ಪಾನಿಪೂರಿ ರಂಗನಾಥ್, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ಸುರೇಶ್, ನವೀನ್, ದಿನಕರ್, ಗಣೇಶ್, ಪ್ರಭು, ಇಮ್ರಾನ್ ಭಾಗವಹಿಸಿದ್ದರು.