ನಗರದಲ್ಲಿ ಎಐಯುಟಿಯುಸಿ ಪ್ರತಿಭಟನೆ
ದಾವಣಗೆರೆ, ಮೇ 14- ಕಾರ್ಮಿಕ ಕಾಯ್ದೆಗಳನ್ನು ಅಮಾನತ್ತಿನಲ್ಲಿಡುವ, ದುರ್ಬಲ ಗೊಳಿಸುವ ಕ್ರಮಗಳನ್ನು ಕೈ ಬಿಡುವಂತೆ ಹಾಗೂ ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಉಚಿತ ಸಾರಿಗೆ ಕಲ್ಪಿಸುವಂತೆ ಒತ್ತಾಯಿಸಿ ನಗರದಲ್ಲಿಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿ ಯುಸಿ) ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಡಳಿತದ ಮುಂಭಾಗದಲ್ಲಿ ನಿನ್ನೆ ಸೇರಿದ್ದ ಸಮಿತಿ ಪದಾಧಿಕಾರಿಗಳು, ಕೆಲ ಕಾಲ ಪ್ರತಿಭಟಿಸಿ ನಂತರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮುಖಾಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೇಡಿಕೆಗಳುಳ್ಳ ಮನವಿ ಸಲ್ಲಿಸಿದರು.
ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರ ಗಳು ಮುಂದಿನ ಮೂರು ವರ್ಷಗಳ ಕಾಲ ಕಾರ್ಮಿಕರ ಕಾಯ್ದೆಗಳನ್ನು ಅಮಾನತ್ತುಗೊ ಳಿಸುವ, ದುಡಿಮೆಯ ಅವಧಿ ಹೆಚ್ಚಳ ಮಾಡುವ, ವಲಸೆ ಕಾರ್ಮಿಕರ ಬಗ್ಗೆ ನಿರ್ಲಕ್ಷತನ ತೋರುವ, ಮನಬಂದಂತೆ ವಜಾಗೊಳಿಸುವ, ವೇತನ ಕಡಿತ ಗೊಳಿಸುವ ಕ್ರಮಗಳ ಮೂಲಕ ಕಾರ್ಮಿಕರಿಗೆ ಜೀವನ ಭದ್ರತೆ-ಸೇವಾ ಭದ್ರತೆಗಳೆರಡನ್ನೂ ಸರ್ವನಾಶ ಮಾಡಲು ಹೊರಟಿವೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್-19 ಬಿಕ್ಕಟ್ಟಿನ ನೆಪದಲ್ಲಿ ಕಾರ್ಮಿಕ ವಿರೋಧಿ ಕ್ರಮಗಳಿಗೆ ಅನುಮತಿಸುವ ವಿವಿಧ ರಾಜ್ಯ ಸರ್ಕಾರಗಳು, ಎಲ್ಲಾ ಸುಗ್ರೀವಾಜ್ಞೆಗಳ-ಆದೇಶಗಳನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. 8 ಗಂಟೆಗಳ ಕೆಲಸದ ಅವಧಿಯನ್ನು ಸಂರಕ್ಷಿಸಬೇಕು. ಕೆಲಸದ ಅವಧಿ 12 ಗಂಟೆಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಕೈಬಿಡಬೇಕು. ವಲಸೆ ಕಾರ್ಮಿಕರ ಪ್ರಯಾಣ ವೆಚ್ಚದ ಶೇ. 85ರಷ್ಟನ್ನು ಕೇಂದ್ರ ಸರ್ಕಾರ ಶೇ. 15ರಷ್ಟು ರಾಜ್ಯ ಸರ್ಕಾರಗಳು ಭರಿಸುವುದಾಗಿ ನೀಡಿರುವ ಭರವಸೆಗಳನ್ನು ಖಾತ್ರಿಪಡಿಸಬೇಕು ಎಂಬತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕುವಾಡ, ಜಿಲ್ಲಾ ಉಪಾಧ್ಯಕ್ಷರುಗಳಾದ ತಿಪ್ಪೇಸ್ವಾಮಿ ಅಣಬೇರು, ಶಿವಾಜಿರಾವ್ ಢಗೆ, ಜಿಲ್ಲಾ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಎಲ್.ಹೆಚ್. ಪ್ರಕಾಶ್ ಸೇರಿದಂತೆ ಇತರರು ಇದ್ದರು.