ನಗರದಲ್ಲಿ ದೊರೆಯದ ಮದ್ಯ: ಹಳ್ಳಿಗಳತ್ತ ಪಾನಪ್ರಿಯರ ಓಟ

ದಾವಣಗೆರೆ, ಮೇ. 4- ನಗರದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಸುತ್ತ ಮುತ್ತಲಿನ ಹಳ್ಳಿಗಳು, ತಾಲ್ಲೂಕುಗಳಿಗೆ ದಾಂಗುಡಿ ಇಟ್ಟು ಮದ್ಯ ಖರೀದಿಸಿ ಬಂದಿದ್ದಾರೆ.

ಕೊರೊನಾ ಸೋಂಕಿತರು ಹೆಚ್ಚಾದ ಕಾರಣ ನಗರದಲ್ಲಿ ಮದ್ಯ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಇದರಿಂದ ನಗರದಲ್ಲಿನ ಹೆಂಡದ ಪ್ರಿಯರು ಬೆಳಿಗ್ಗೆಯೇ ನಿರಾಶೆ ಅನುಭವಿಸಬೇಕಾಯಿತು. ನಗರದ ಮದ್ಯದಂಗಡಿಗಳ ಮಾಲೀಕರೂ ಸಹ ಮಾರಾಟಕ್ಕೆ ಪರವಾನಗಿ ಸಿಗಬಹುದೆಂಬ ಆಶಾಭಾವನೆಯೊಂದಿಗೆ ತಯಾರಾಗಿದ್ದರು. 

ರಾಜ್ಯದ ಹಲವೆಡೆ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಅದರಂತೆ ದಾವಣಗೆರೆಯಲ್ಲಿಯೂ ಅನುಮತಿ ಸಿಗಬಹು ದೆಂಬ ಅತಿಯಾದ ನಿರೀಕ್ಷೆ ಹಲವರಲ್ಲಿತ್ತು. ಬೆಳಿಗ್ಗೆ ಮದ್ಯದಂಗಡಿಗಳು ಬಾಗಿಲು ತೆರೆಯದೇ ಇದ್ದಾಗ ತೀವ್ರ ಬೇಸರಗೊಂಡ ಜನ, ಸಮೀಪದ ಹಳ್ಳಿಗಳಲ್ಲಿ ಮದ್ಯ ದೊರೆಯುತ್ತಿದೆ ಎಂಬ ಸುದ್ದಿ ತಿಳಿಯುತ್ತಲೇ ವಾಹನಗಳನ್ನೇರಿ ದಾಂಗುಡಿ ಇಟ್ಟಿದ್ದಾರೆ.

ಇತ್ತ ದಾವಣಗೆರೆ ಜನತೆ ಮದ್ಯಕ್ಕಾಗಿ ಬರುತ್ತಿದ್ದಾರೆಂದು ತಿಳಿದ ಗ್ರಾಮೀಣರು ತೀವ್ರ ಆತಂಕಕ್ಕೆ ಒಳಗಾದ ಪ್ರಸಂಗಗಳೂ ನಡೆದಿವೆ. ನಗರದಲ್ಲಿ ಈಗಾಗಲೇ ಸೋಂಕಿ ತರ ಸಂಖ್ಯೆ ಹೆಚ್ಚಾಗಿದೆ. ಸಾವುಗಳೂ ಸಂಭವಿಸಿವೆ. 

ಈ ವೇಳೆ ನಗರದಿಂದ ನಮ್ಮ ಊರುಗಳಿಗೂ ಸೋಂಕು ಹರಡುವ ಸಾಧ್ಯತೆ ಇರುವುದಾಗಿ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ನಗರದಲ್ಲಿ ಮದ್ಯ ಸಿಗದಿದ್ದರೇನಂತೆ ಬೇರೆ ಊರಿಗೆ ತೆರಳಿ ತಂದವರು ಇದೀಗ ಯುದ್ಧ ಗೆದ್ದ ಸಂಭ್ರಮದಲ್ಲಿದ್ದಾರೆ. 

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಂಪು ವಲಯ ಸೇರಿದಂತೆ ಎಲ್ಲಾ ವಲಯ ಗಳಲ್ಲೂ ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೂ ಸಹ ನಗರ ದಲ್ಲಿ ಮಾರಾಟಕ್ಕೆ ಅನುಮತಿ ನೀಡಿಲ್ಲ. 

ಈ ಬಗ್ಗೆ ಅಬಕಾರಿ ಉಪ ಆಯುಕ್ತ ನಾಗರಾಜ್ ಅವರು, ಪತ್ರಿಕೆಯೊಂದಿಗೆ ಮಾತನಾಡಿ ಜಿಲ್ಲಾಡಳಿತದ ಸೂಚನೆಯಿಂದ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯಮಾರಾಟಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿಸಿದ್ದಾರೆ. ಉಳಿದಂತೆ ಜಿಲ್ಲಾದ್ಯಂತ ಮದ್ಯ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾಡಳಿತ ಅನುಮತಿ ನೀಡಿದ ನಂತರವೇ ನಗರದಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದವರು ತಿಳಿಸಿದ್ದಾರೆ.


ಪಾನಕ್ಕಾಗಿ ಅಲೆದಾಟ, ರಸ್ತೆ ಬದೀಲೇ ತೂರಾಟ !

ನಗರದಲ್ಲಿ ಮದ್ಯದ ಅಂಗಡಿಗಳು ತೆರೆದಿರಲಿಲ್ಲ. ಹೀಗಾಗಿ ಸಾಕಷ್ಟು ಜನರು ಮದ್ಯವನ್ನು ಅರಸಿಕೊಂಡು ಹತ್ತಿರದ ಊರುಗಳಿಗೆ ದಾಪುಗಾಲು ಹಾಕಿದ್ದರು.

ನಗರ ಸಮೀಪದ ತುರ್ಚಘಟ್ಟದ ಬಳಿ ಮದ್ಯಕ್ಕಾಗಿ ಸರದಿಯಲ್ಲಿ ನಿಂತ ಸಾಕಷ್ಟು ಜನರು ದಾವಣಗೆರೆಯವರೇ ಆಗಿದ್ದರು. ಇನ್ನು ಕೆಲವರು ಹರಿಹರಕ್ಕೂ ತೆರಳಿದ್ದರು.

ಮದ್ಯಪಾನ ತಾಣಗಳಿಗೆ ತೆರಳಲು ನೇರ ಮಾರ್ಗ ಲಭ್ಯವಿಲ್ಲದೇ ಇದ್ದವರು, ವಾಮ ಮಾರ್ಗ ಬಳಸಿದರು. ಹಲವಾರು ಹಳ್ಳಿಗಳನ್ನು ದಾಟಿ ಕೊನೆಗೂ ‘ತೀರ್ಥ ತಾಣ’ಗಳಿಗೆ ತಲುಪಿದರು. 

ಆದರೆ, ಅಲ್ಲಿ ಅವರು ಬಯಸಿದ ಬ್ರಾಂಡ್‌ಗಳಿಗೆ ಅವಕಾಶ ಇರಲಿಲ್ಲ. ಮದ್ಯದಂಗಡಿಯಾತ ಕೊಟ್ಟ ಬ್ರಾಂಡ್‌ ಎಣ್ಣೆಗಳನ್ನೇ ಸೌಭಾಗ್ಯ ಎಂದು ಒಪ್ಪಿಕೊಂಡು ಸ್ವೀಕರಿಸುತ್ತಿದ್ದರು. ಪಾರ್ಸಲ್ ಮದ್ಯವನ್ನು ದಾವಣಗೆರೆಗೆ ಬರುವ ರಸ್ತೆ ಮಾರ್ಗದ ಉದ್ದಕ್ಕೂ ಕುಳಿತು
ಕುಡಿಯುತ್ತಿದ್ದವರು. ಕೆಲವರ ತೂರಾಟವೂ ಕಂಡು ಬಂತು.


ಹರಿಹರ : ಎಣ್ಣೆ ಸಂಭ್ರಮದಲ್ಲಿ ಷರತ್ತುಗಳು ಗಾಳಿಗೆ

ಹರಿಹರ, ಮೇ 4 – ಸರ್ಕಾರದ ಆದೇಶದಂತೆ ಸೋಮವಾರ ಬೆಳಗ್ಗೆ ಮದ್ಯದಂಗಡಿ ಪ್ರಾರಂಭವಾಗುತ್ತಿದ್ದಂತೆ ಗ್ರಾಹಕರ ದಂಡು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಪಡೆದುಕೊಂಡಿದ್ದಾರೆ.

ಎಂ.ಆರ್.ಪಿ. ಮದ್ಯದ ಅಂಗಡಿಗಳನ್ನು ತೆರೆಯಲು ಆದೇಶ ನೀಡಲಾಗಿತ್ತಲ್ಲದೇ, ಕೆಲವು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಂಗಡಿ ಮಾಲೀಕರಿಗೆ ತಿಳಿಸಲಾಗಿತ್ತು.

ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಮದ್ಯ ಮಾರಾಟದ ಅನುಮತಿ ಇರದೇ ಇದ್ದುದರಿಂದ, ನಗರದ ಏಳು ಎಂ.ಆರ್.ಪಿ. ಅಂಗಡಿಗಳ ಮುಂದೆ ಸಹಸ್ರಾರು ಜನರು ಸರದಿಯಲ್ಲಿ ನಿಂತಿದ್ದರು.

ಜನರು ಸಾಮಾಜಿಕ ಅಂತರದ ನಿಯಮಗಳನ್ನು ಗಾಳಿಗೆ ತೂರಿದ್ದರು. ಅಂಗಡಿ ಮುಂದೆ ಬ್ಯಾರಿಕೇಡ್‌ ಹಾಕಿ, ಸರದಿಯಲ್ಲಿ  ನಿಲ್ಲಲು ಸುಣ್ಣದ ಪುಡಿಯ ಮಾರ್ಕ್ ಮಾಡಿದ್ದು ಯಾವುದೇ ಪ್ರಯೋಜನಕ್ಕೆ ಬಂದಂತೆ ಕಾಣಲಿಲ್ಲ.

ಮದ್ಯದ ಅಂಗಡಿ ಮುಂದೆ ಇಬ್ಬರು ಪೊಲೀಸ್ ಸಿಬ್ಬಂದಿ ಇದ್ದರೂ ಇವರ ನೂಕ್ಕು ನುಗ್ಗಲಿಗೆ ಅವರು ಕೂಡಾ ಮೂಕ ವಿಸ್ಮಿತರಾಗಿ ನೋಡಿ ಕೊಂಡು ನಿಂತಿರುವ ಪ್ರಸಂಗವೂ ನಡೆಯಿತು. 

ಮದ್ಯದ ಅಂಗಡಿ ಮುಂದೆ ಜಮಾಯಿಸಿದ ಜನರನ್ನು ನೋಡಿ  ತಹಶೀಲ್ದಾರ ಕೆ. ಬಿ‌ ರಾಮಚಂದ್ರಪ್ಪ, ತಾವೂ ಕೂಡ ಜನರಿಗೆ ದೂರದಲ್ಲಿ ನಿಂತುಕೊಂಡು ತೆಗೆದುಕೊಳ್ಳಿ ಎಂದು ಹೇಳಿದರು. 

ಆದರೆ, ಅದು ತಹಬಂದಿಗೆ ಬರುವ ಲಕ್ಷಣಗಳು ಕಾಣದೇ ಇರುವುದನ್ನು ಗಮನಿಸಿದ ಅಬಕಾರಿ ಇಲಾಖೆಯ ಅಧಿಕಾರಿ ರಂಗಯ್ಯನವರನ್ನು ಸ್ಥಳಕ್ಕೆ ಕರೆಸಿ ಅವರಿಗೆ ಈ ರೀತಿಯಲ್ಲಿ ಅಂಗಡಿಗಳಲ್ಲಿ ಜನರು ಸೇರಿಕೊಂಡು ಅಂತರವನ್ನು ಕಾಯ್ದುಕೊ ಳ್ಳದೆ ಇದ್ದರೆ ನಾನು ಜಿಲ್ಲಾಧಿಕಾರಿಯವರಿಗೆ ಯಾವ ರೀತಿಯಲ್ಲಿ ಉತ್ತರವನ್ನು ಕೊಡಬೇಕು ಹೇಳಿ? ಎಂದು ಪ್ರಶ್ನಿಸಿದರು. ಕೂಡಲೇ ಅಂಗಡಿ ಮಾಲೀ ಕರಿಗೆ ಕರೆಸಿ. ಯಾರು ಮಾಲೀಕರು ಅಂತರವನ್ನು ಕಾಯ್ದುಕೊಂಡು ವ್ಯಾಪಾರ ಮಾಡುತ್ತಾರೋ ಅಂತಹ ಅಂಗಡಿಗಳಿಗೆ ಮಾತ್ರ ಮಾರಾಟ ಮಾಡಲು ಅವಕಾಶ ನೀಡುವಂತೆ ಸೂಚಿಸಿದರು.


error: Content is protected !!