ದಾವಣಗೆರೆ,ಮೇ 13- ಕೊರೊನಾ ವೈರಸ್ ಕಾರಣದಿಂದ ಆಗಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿದ್ದ ವ್ಯಾಪಾರಸ್ಥರಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಗರದಲ್ಲಿ ವ್ಯಾಪಾರ, ವಹಿವಾಟುಗಳಿಗೆ ಅವಕಾಶ ಮಾಡಿಕೊಟ್ಟಿರುವ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸಮಸ್ತ ವರ್ತಕರ ಪರವಾಗಿ ಕೃತಜ್ಞತೆ ಸಲ್ಲಿಸಿದೆ.
ಸರ್ಕಾರದ ಮಾರ್ಗಸೂಚಿಗಳನ್ವಯ ಕೆಂಪು ವಲಯದಲ್ಲಿ ಆರ್ಥಿಕತೆಗೆ ನೀಡಲಾಗಿರುವ ವಿನಾಯಿತಿಯನ್ನು ನಗರಕ್ಕೂ ಅನ್ವಯಿಸುವಂತೆ ವ್ಯಾಪಾರ, ವಹಿವಾಟುಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಅವಕಾಶ ನೀಡುವುದರ ಮೂಲಕ ವರ್ತಕರಿಗೆ ಸ್ಪಂದಿಸಿದ್ದಾರೆ ಎಂದು ಛೇಂಬರ್ ಆಫ್ ಕಾಮರ್ಸ್ ತಿಳಿಸಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ನೇತೃತ್ವದಲ್ಲಿ ಇಂದು ತುರ್ತಾಗಿ ಸೇರಿದ್ದ ವರ್ತಕ ಬಾಂಧವರ ಸಭೆಯಲ್ಲಿ ವ್ಯಾಪಾರ ವಹಿವಾಟುಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಸರ್ಕಾರದ ಮಾರ್ಗಸೂಚಿ ಮತ್ತು ಕೋವಿಡ್ 19 ನಿಬಂಧನೆಗಳ ಕುರಿತಂತೆ ವಿವರಿಸಲಾಯಿತು.
ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕು ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರುಗಳಲ್ಲದೇ, ವೈದ್ಯರು, ಶುಶ್ರೂಷಕರು, ಪೊಲೀಸರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರ ಶ್ರಮ ಮತ್ತು ಸೇವೆಯನ್ನು ಸಭೆಯಲ್ಲಿ ಮೆಲಕು ಹಾಕಲಾಯಿತು.
ಜಿಲ್ಲಾಧಿಕಾರಿಗಳು ನೀಡಿರುವ ನಿರ್ದೇಶನ ಗಳನ್ವಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ವ್ಯಾಪಾರ, ವಹಿವಾಟು ನಡೆಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಉಪಾಧ್ಯಕ್ಷ ಮಾಗಾನಹಳ್ಳಿ ನಿಜಾನಂದಪ್ಪ, ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಅವರುಗಳು ವರ್ತಕ ಬಾಂಧವರಲ್ಲಿ ಮನವಿ ಮಾಡಿಕೊಂಡರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಖಜಾಂಚಿ ಟಿ.ಎಸ್. ಜಯರುದ್ರೇಶ್, ಕಿರುವಾಡಿ ವಿ.ಸೋಮಶೇಖರ್, ಜಂಬಗಿ ರಾಧೇಶ್, ದೊಗ್ಗಳ್ಳಿ ಬಸವರಾಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
December 24, 2024