ಹರಿಹರ: ಅಬ್ಬರವಿಲ್ಲದ ಸರಳ ಹೋಳಿ

ಹರಿಹರ, ಮಾ.29- ನಗರದಲ್ಲಿ ಈ ಬಾರಿ ಹೋಳಿ ಹಬ್ಬವು ಡಿಜೆ ಸೌಂಡ್ ಸಿಸ್ಟಮ್ ಅಬ್ಬರವಿಲ್ಲದೆ ಮಡಿಕೆ, ಹೊಡೆಯದೆ, ಗುಂಪು ಗುಂಪಾಗಿ ಆಚರಣೆ ಮಾಡದೆ ಸರಳ ರಂಗು ರಂಗಿನ ಹೋಳಿ ಹಬ್ಬವನ್ನು ಆಚರಣೆ ಮಾಡಲಾಯಿತು.

ನಗರದಲ್ಲಿ ಹೋಳಿ ಹಬ್ಬ ಬಂತು ಎಂದರೆ ಯುವಕ, ಯುವತಿಯರು ಎಗ್ಗಿಲ್ಲದೆ ಬಣ್ಣವನ್ನು ಪರಸ್ಪರ ಎರಚುವ ಜೊತೆಗೆ ತಲೆಗೆ ಮೊಟ್ಟೆ ಹೊಡೆದುಕೊಂಡು ನಂತರದಲ್ಲಿ ಎಲ್ಲರೂ ಒಂದೆಡೆ ಗುಂಪಾಗಿ ಸೇರಿ ಹಲಗೆ ಬಾರಿಸುತ್ತಾ ಡಿಜೆ ಸದ್ದಿಗೆ, ತಾಳಕ್ಕೆ ಹೆಜ್ಜೆಗಳನ್ನು ಹಾಕಿ ಕುಣಿದು ಕುಪ್ಪಳಿಸುತ್ತಾ ಮೈಮೇಲೆ ಒಬ್ಬರಿಗೊಬ್ಬರು ಬಣ್ಣದ ನೀರು ಎರಚಿಕೊಂಡು ಸಂತಸದಿಂದ ಹೋಳಿ ಆಚರಣೆ ಮಾಡುತ್ತಿದ್ದರು. 

ದೂರ ಇರುವ ಗೆಳೆಯರ ಮನೆಗಳಿಗೆ ಬೈಕ್‌ನಲ್ಲಿ ಯುವಕ, ಯುವತಿಯರು  ಹೋಗಿ ಬಣ್ಣವನ್ನು ಪರಸ್ಪರ ಹಚ್ಚಿಕೊಂಡು ಬರುತ್ತಿದ್ದರು. 

ನಗರದ ಹವಳದ ಬೀದಿ, ಕೋಟೆ ಬಡಾವಣೆ, ಹೊಸಭರಂಪುರ ಬಡಾವಣೆ, ಹೈಸ್ಕೂಲ್ ಬಡಾವಣೆ, ನಡವಲಪೇಟೆ, ವಿಜಯನಗರ ಬಡಾವಣೆ ಸೇರಿದಂತೆ, ಇನ್ನಿತರೆ ಬಡಾವಣೆಯ ಪ್ರಮುಖ ವೃತ್ತಗಳಲ್ಲಿ ಮಡಿಕೆ ಒಡೆಯಲು ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಕೊರೊನಾ ಹರಡುವ ಹಿನ್ನೆಲೆಯಲ್ಲಿ ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಿದೆ. ಹಾಗಾಗಿ ಯುವಕ, ಯುವತಿಯರು ತಮ್ಮ ತಮ್ಮ ಮನೆಯ ಹತ್ತಿರವಿರುವ ಸ್ನೇಹಿತರಿಗೆ, ಸಂಬಂಧಿಕರಿಗೆ ಬಣ್ಣವನ್ನು ಎರಚುವ ಮೂಲಕ ಹೋಳಿ ಹಬ್ಬವನ್ನು ಆಚರಣೆ ಮಾಡಿದರು.

ನಗರದ ಮುಖ್ಯ ರಸ್ತೆ, ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಹೆಚ್. ಶಿವಪ್ಪ ಸರ್ಕಲ್, ಹರಪನಹಳ್ಳಿ ರಸ್ತೆ, ಪಿ.ಬಿ. ರಸ್ತೆ, ತರಕಾರಿ ಮಾರುಕಟ್ಟೆ ಸೇರಿದಂತೆ ಹಲವಾರು ವ್ಯಾಪಾರ ಕೇಂದ್ರಗಳಲ್ಲಿರುವ ಅಂಗಡಿಗಳನ್ನು ಬೆಳಿಗ್ಗೆ ಬಂದ್ ಆಗಿ ನಂತರ ಸಂಜೆ ತೆರೆದುಕೊಂಡು ವ್ಯಾಪಾರ, ವಹಿವಾಟು ನಡೆಸಿದವು. 

ಬಿಸಿಲಿನ ತಾಪ ಹೆಚ್ಚಿನ ಪ್ರಮಾಣದಲ್ಲಿ ಇದ್ದ ಪರಿಣಾಮವಾಗಿ ಕಲ್ಲಂಗಡಿ, ದ್ರಾಕ್ಷಿ, ದಾಳಿಂಬೆ ಹಣ್ಣು ಹಾಗೂ ತಂಪಾದ ಪಾನೀಯ ಸೇವನೆಯು ಹೆಚ್ಚು ಕಂಡು ಬಂದಿತು. ಸಿಪಿಐ ಸತೀಶ್ ಕುಮಾರ್, ಪಿಎಸ್ಐಗಳಾದ ಬಸವರಾಜ್ ತೆಲಿ,
ಡಿ. ರವಿಕುಮಾರ್ ಅವರ ತಂಡವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.

error: Content is protected !!