ಜ್ಞಾನಾಧಾರಿತ ಸಮಾಜ ಕಟ್ಟುವಲ್ಲಿ ಅಧ್ಯಾಪಕರ ಪಾತ್ರ ದೊಡ್ಡದು

ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಎ.ಬಿ. ರಾಮಚಂದ್ರಪ್ಪ

ಮಲೇಬೆನ್ನೂರು, ಮಾ.27- ಜ್ಞಾನಾ ಧಾರಿತ ಸಮಾಜ ಕಟ್ಟುವಲ್ಲಿ ಅಧ್ಯಾಪಕರ ಪಾತ್ರ ತುಂಬಾ ದೊಡ್ಡದು ಎಂದು ಹರಿಹರ ಎಸ್‌ಜೆವಿಪಿ ಕಾಲೇಜು ಪ್ರಾಧ್ಯಾಪಕ ಪ್ರೊ. ಎ.ಬಿ. ರಾಮಚಂದ್ರಪ್ಪ ಹೇಳಿದರು.

ಹನಗವಾಡಿ ಸಮೀಪ ಇರುವ ಪ್ರೊ. ಬಿ. ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜುಗಳ ಎಸ್ಸಿ-ಎಸ್ಟಿ ಅಧ್ಯಾಪಕರ ಸಂಘದ ವತಿಯಿಂದ ಹಮ್ಮಿ ಕೊಂಡಿದ್ದ ಎರಡು ದಿನಗಳ ಅಂತರ ರಾಷ್ಟ್ರೀಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಪರಿವರ್ತನೆಗಾಗಿ ಅನೇಕ ಸಾಮಾಜಿಕ ಚಿಂತಕರು ಹೋರಾಡಿ ದ್ದಾರೆ. ಅವರ ಚಿಂತನೆ, ಹೋರಾಟಗಳನ್ನು ನಾವು ತಳಹದಿಯನ್ನಾಗಿಸಿಕೊಂಡರೆ ಪಠ್ಯ ಬೋಧನೆಯ ಮೂಲಕವೇ ಸಾಮಾಜಿಕ ಪರಿವರ್ತನೆಯ ಬೀಜಗಳನ್ನು ಬಿತ್ತಬಹುದು ಅಭಿಪ್ರಾಯ ಪಟ್ಟರು.

ಶಿಕ್ಷಣ ಅರಿವಿನ ಸಾಧನವಾಗಿದ್ದು, ದಾಸ್ಯ ವಿಮೋಚನೆಯ ಸಾಧನವೂ ಹೌದು. ಗೌರವ ಹಾಗೂ ಬಡತನವನ್ನು ಅರ್ಥ ಮಾಡಿಕೊಳ್ಳುವ ಮತ್ತು ಅಭಿವೃದ್ಧಿಯ ಸಾಧನವಾಗಿದೆ. ಪಠ್ಯವನ್ನು ಬೋಧಿಸುವ ನಾವುಗಳು ಪಠ್ಯವನ್ನು ಪಠ್ಯವಾಗಿ ಒಪ್ಪಿತ ನೆಲೆಯಲ್ಲೇ ಹೇಳುವುದಕ್ಕಿಂತ ಪಠ್ಯವನ್ನು ಸಾಮಾಜೀಕರಿಸಿ ಹೇಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಏಕ ರಾಷ್ಟ್ರೀಯತೆ, ಏಕ ಚುನಾವಣೆ, ಏಕ ಸಂಸ್ಕೃತಿ ಪ್ರತಿಪಾದಿಸುವ ಈ ಸಂದರ್ಭದಲ್ಲಿ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆ, ಮಾನವೀಕರಣದ ಹಾಗೂ ಅಂಬೇಡ್ಕರ್ ಕನಸಿನ ಬಲಿಷ್ಠ ಭಾರತವನ್ನು ಕಟ್ಟುವ ಕಡೆ ಅಧ್ಯಾಪಕರುಗಳು ಚಿಂತಿಸಿ, ಬೋಧಿಸುವ ಅಗತ್ಯತೆ ಇಂದಿನದಾಗಿದೆ ಎಂದು ರಾಮಚಂದ್ರಪ್ಪ ಹೇಳಿದರು.

ಅಧ್ಯಾಪಕರುಗಳು ಪಠ್ಯದ ಪಾರಂಪರಿಕ ಅರ್ಥಗಳನ್ನು ಹೇಳದೆ, ಪಠ್ಯವನ್ನು ಸಾಮಾಜೀಕರಿಸಿ ವಾಸ್ತವದ ತಿಳುವಳಿಕೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿ, ಹೊಸ ಸಮಾಜ ಕಟ್ಟಲು ಪ್ರೇರೇಪಿಸುವಂತೆ ಕರೆ ನೀಡಿದರು.

ಕೆಜಿಸಿಎಸ್‌ಸಿಎಸ್‌ಟಿಎ ಅಧ್ಯಕ್ಷ ಡಾ. ವೈ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಸಾಗರದ ಇಂದಿರಾಗಾಂಧಿ ಕಾಲೇಜಿನ ಡಾ. ರಾಜು, ದಾವಣಗೆರೆ ವಿವಿ ಪ್ರಾಧ್ಯಾಪಕ ವಿಶ್ವನಾಥ್, ಮೈಸೂರಿನ ಡಾ.ಎಂ.ಎಸ್. ಅನಿತಾ, ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿವಿಯ ಡಾ.ಜಿ. ಶ್ರೀನಾಥ್ ರಾಜ್, ಬೆಂಗಳೂರಿನ ಡಾ. ಕವಳಮ್ಮ, ಡಾ. ಆದಿನಾರಾಯಣ, ಡಾ. ವಿನುತ ಆನಂದ್, ಮೈಸೂರಿನ ಡಾ. ಪುಟ್ಟರಾಜು, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಬೆಂಗಳೂರಿನ ಡಾ. ವಿವೇಕ್ ಸ್ವಾಗತಿಸಿದರು. ಮೈಸೂರಿನ ಡಾ. ನಂಜುಂಡಯ್ಯ ನಿರೂಪಿಸಿದರು.ಸಿಂಧನೂರಿನ ಪ್ರೊ. ಎಂ. ಹನುಮಂತಪ್ಪ ವಂದಿಸಿದರು. ರಾಜ್ಯದ ನಾನಾ ಭಾಗಳಿಂದ ಎಸ್ಸಿ-ಎಸ್ಟಿ ಅಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!