ಕೈ ತಪ್ಪಿದ್ದ ಆಭರಣ, ನಗದುಳ್ಳ ಬ್ಯಾಗ್ ಮಾಲೀಕರಿಗೆ ಸೇರಿಸಿದ ರೈಲ್ವೇ ಪೊಲೀಸರು

ದಾವಣಗೆರೆ, ಆ.10- ರೈಲಿನಲ್ಲಿ ಪ್ರಯಾಣಿಸುವ ವೇಳೆ ಕೈ ತಪ್ಪಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದುವುಳ್ಳ ಬ್ಯಾಗನ್ನು ಹುಡುಕಿ ಬ್ಯಾಗ್‌ನ ವಾರಸುದಾರರಾದ ಮಹಿಳಾ ಪ್ರಯಾಣಿಕರೋರ್ವರ ಕೈ ಸೇರಿಸುವಲ್ಲಿ ಇಲ್ಲಿನ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜವಾಬ್ದಾರಿ ಮೆರೆದಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಯಾಣಿಕರಾದ ರುಕಾಯಭಾನು ಮುಲ್ಲಾ ಎಂಬುವವರು ಹುಬ್ಬಳ್ಳಿಯಿಂದ ರಾಣೆಬೆನ್ನೂರಿಗೆ ರೈಲಿನಲ್ಲಿ ಪ್ರಯಾಣಿಸಿದ್ದು, ಸುಮಾರು 60 ಗ್ರಾಂ ಬಂಗಾರದ ಒಡವೆಗಳು, 430 ರೂ. ನಗದು ಮತ್ತು ಬಟ್ಟೆಗಳುಳ್ಳ ತಮ್ಮ ಬ್ಯಾಗ್ ಅನ್ನು ಮರೆತು ರೈಲಿನಲ್ಲೇ ಬಿಟ್ಟು ರಾಣೇಬೆನ್ನೂರಿನ ರೈಲ್ವೇ ನಿಲ್ದಾಣದಲ್ಲಿ ಇಳಿದಿದ್ದಾರೆ.

ನಂತರ ಬ್ಯಾಗ್ ಬಗ್ಗೆ ನೆನಪಾಗುವಷ್ಟರಲ್ಲಿ ತಾವು ಪ್ರಯಾಣಿಸಿದ ರೈಲು ಹೊರಟು ಹೋಗಿತ್ತು. ಘಟನೆಯ ಬಗ್ಗೆ ರೈಲ್ವೇ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದರು. ಕರ್ತವ್ಯ ನಿರತ ಠಾಣೆಯ ಸಿಬ್ಬಂದಿಗಳು ಸೂಚನೆಯಂತೆ ಬ್ಯಾಗ್ ಹುಡುಕಿಕೊಂಡು ಬಂದು ಠಾಣೆಗೆ ಒಪ್ಪಿಸಿದ್ದು, ಅದನ್ನು ಪರಿಶೀಲಿಸಿ, ಸಿಬ್ಬಂದಿಗಳ ಸಮ್ಮುಖದಲ್ಲಿ ವಾರಸುದಾರರಾದ ರುಕಾಯಭಾನು ಮುಲ್ಲಾ ಅವರಿಗೆ ಒಪ್ಪಿಸಲಾಯಿತು ಎಂದು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮುಸ್ತಾಕ್ ಅಹ್ಮದ್ ತಿಳಿಸಿದ್ದಾರೆ. ತಮ್ಮ ಸಿಬ್ಬಂದಿಗಳ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

error: Content is protected !!