ಡಾ. ಹೊನ್ನಪ್ಪ ಹೊನ್ನ ಪ್ಪನವರ್
ದಾವಣಗೆರೆ, ಆ.5- ಒಲವಿಂದಲೇ ಬದುಕಿಗೆ ಚೆಲುವು. ಒಲವೊಂದೇ ಬದುಕಿನ ಬಲವು ಎಂಬುದನ್ನು ಅರಿತಿದ್ದ ದ.ರಾ. ಬೇಂದ್ರೆ ಅವರು, ಬದುಕಿನ ಎಲ್ಲಾ ಹಂತ ಗಳಲ್ಲೂ ಎಲ್ಲದಕ್ಕೂ ಒಲವನ್ನೇ ಬಳಸಿ ಕೊಂಡು ಅಜರಾಮರರಾಗಿದ್ದಾರೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಮಹಾ ವಿದ್ಯಾಲಯದ ಕನ್ನಡ ಉಪನ್ಯಾಸಕರು ಹಾಗೂ ವಾಗ್ಮಿ ಡಾ. ಹೊನ್ನಪ್ಪ ಹೊನ್ನ ಪ್ಪನವರ್ ಕನ್ನಡದ ಮೇರು ಕವಿ ದ. ರಾ ಬೇಂದ್ರೆಯವರನ್ನು ಹೃನ್ಮನದಿಂದ ಸ್ಮರಿಸಿದರು.
ದಾವಣಗೆರೆ ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗದ ವತಿಯಿಂದ ಆಯೋಜಿ ಸಲಾಗಿದ್ದ ಆನ್ ಲೈನ್ ಕಾರ್ಯಕ್ರಮದಲ್ಲಿ `ದ.ರಾ. ಬೇಂದ್ರೆಯವರ ಕಾವ್ಯದಲ್ಲಿ ದಾಂಪತ್ಯ ಜೀವನ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ಒಲವೇ ದ.ರಾ. ಬೇಂದ್ರೆಯವರ ಕಾವ್ಯದ ಜೀವಸೆಲೆಯಾಗಿತ್ತು. ಈ ಭಾವ ಕೇವಲ ದಾಂಪತ್ಯ ಗೀತೆಗಳಲ್ಲಿ ಮಾತ್ರವಲ್ಲದೆ ಅವರ ಎಲ್ಲಾ ಕಾವ್ಯ, ಕೃತಿ ಗಳಲ್ಲಿ ಅನುಭಾವಮೃತದ ಹೂರಣವಾಗಿ ಓದು ಗರಿಗೆ ರಸಗವಳ ಉಣಿಸಿದೆ ಎಂದು ಬಣ್ಣಿಸಿದರು.
ಜೀವನದುದ್ದಕ್ಕೂ ಕಡು ಕಷ್ಟಗಳನ್ನು ಅನುಭವಿಸಿದ ಬೇಂದ್ರೆಯವರು ತಮ್ಮ ಜೀವನ ಪ್ರೇಮ ಮತ್ತು ಸಕಾರಾತ್ಮಕ ದೃಷ್ಟಿಕೋನದಿಂದಾಗಿಯೇ ಎಲ್ಲವನ್ನೂ ಸೈರಿಸಿ ಜಯಿಸಿದವರು. ಹಾಗಾಗಿಯೇ ಬೇಂದ್ರೆ ಸಾಹಿತ್ಯ ಬದುಕಿನ ಮಾರ್ಮಿಕ ಸತ್ಯವನ್ನು ಬೋಧಿಸುತ್ತದೆ. ಮಾನವ ಸಹಜ ಬದುಕಿನ ಸರ್ವೇ ಸಾಮಾನ್ಯ ವಿಚಾರಗಳಿಂದ ಹಿಡಿದು ಆಳವಾದ ವೈಚಾರಿಕ ಚಿಂತನೆಗಳು ಅಕ್ಷರಗಳಲ್ಲಿ ಅನುಭವದ ಮುತ್ತಾಗಿ ಪೋಣಿಸಲ್ಪಟ್ಟಿರುವುದೇ ಬೇಂದ್ರೆ ಕಾವ್ಯ ಕೃತಿಗಳು ಎಲ್ಲಾ ಓದುಗರಿಗೂ ಆಪ್ತ ಎನಿಸುವುದಕ್ಕೆ ಕಾರಣ ಎಂದು ಬಣ್ಣಿಸಿದ ಡಾ. ಹೊನ್ನಪ್ಪ ಅವರು ಬೇಂದ್ರೆಯವರ ಹಲವು ಕಾವ್ಯದ ಸಾಲುಗಳ ಸಾರವನ್ನು ಉದಾಹರಣೆಯೊಂದಿಗೆ ವಿವರಿಸಿದರು.
ಪ್ರೀತಿ ಧೈರ್ಯವನ್ನು ನೀಡುತ್ತದೆ. ತನ್ನವರ ಹಿತ ಕಾಪಾಡುತ್ತದೆ. ಬದುಕನ್ನು ಮುನ್ನಡೆಸುತ್ತದೆ. ಭಾವನೆಯನ್ನು ವಿಶಾಲಗೊಳಿಸುತ್ತದೆ. ನೋವ ನುಂಗಿ ಮುನ್ನೆಜ್ಜೆ ಇಡಲು ಸಹಕರಿಸುತ್ತದೆ. ಇಂತಹ ಕಾರ್ಯ ಪರಸ್ಪರ ಗಂಡ – ಹೆಂಡತಿ, ಮಕ್ಕಳಲ್ಲಿ ನಡೆದಾಗ ಕುಟುಂಬದಲ್ಲಿ ಸುಖ, ಸಂತೋಷ ನೆಲೆಸುತ್ತದೆ. ಉನ್ನತಿ ಸಾಧ್ಯವಾಗುತ್ತದೆ. ಈ ಸಾಧ್ಯತೆಗಳನ್ನು ಬೇಂದ್ರೆಯವರ ಬದುಕು ಮತ್ತು ಬರಹ ಕಲಿಸಿ ಕೊಡುತ್ತದೆ ಎಂದು
ಡಾ. ಹೊನ್ನಪ್ಪ ಅರ್ಥೈಸಿದರು.
ಡಾ. ಫ್ರಾನ್ಸಿಸ್ ಡಿ ಕ್ಸೇವಿಯರ್ ಅವರು – ಬುದ್ಧ, ಪ್ರೊ. ಅಂಜಿನಪ್ಪ ಹಿಕ್ಕಿಂಗೆರೆ ಅವರು – ಬದುಕು, ಶ್ರೀಮತಿ ವೀಣಾ ಕೃಷ್ಣಮೂರ್ತಿ ಯವರು – ಗಡಿಯಾರ, ಶ್ರೀಮತಿ ಉಮಾ ದೇವಿ ಹಿರೇಮಠ ಅವರು – ಶಾಪ, ಶ್ರೀಮತಿ ಮಂಜುಳಾ ಸುನೀಲ್ ಅವರು – ಸಂಭವಾಮಿ ಯುಗೇ ಯುಗೇ , ತಾಜುದ್ದೀನ್ ಬೇತೂರು ಅವರು – ಬಲ್ಲರೇನು ಇದನ, ಫಕ್ಕೀರೇಶ್ ಆದಾಪುರ ಅವರು – ಮತ್ತೆ ಬಾರದಿರಲಿ ಆ ದಿನಗಳು, ರಂಗನಾಥ ಕೆ. ಎನ್. ಜಿಗಳಿ ಅವರು – ಮನೆ ದೇವರು ಅಪ್ಪ, ಪ್ರಭು ಗೊಲ್ಲರಹಳ್ಳಿಯವರು – ಕಾಪಾಡು ಆರಾಧ್ಯ ದೈವವೇ ಎಂಬ ಸ್ವರಚಿತ ಕವನ ವಾಚಿಸಿದರು.
ಉದಯೋನ್ಮುಖ ಗಾಯಕ ಜಿ.ವಿ. ಆಕಾಶ್ ಬೇಂದ್ರೆ ಗೀತೆಗಳನ್ನು ಹಾಡಿದರು. ಬಳಗದ ಸಂಚಾಲಕ ಗಂಗಾಧರ ಬಿ.ಎಲ್. ನಿಟ್ಟೂರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕರಾದ ಡಾ. ಅನಿತಾ ಹೆಚ್. ದೊಡ್ಡಗೌಡರ್ ಆನ್‌ಲೈನ್ ಕಾರ್ಯಕ್ರಮ ನಿರ್ವಹಿಸಿದರು.
ಸಂತೆಬೆನ್ನೂರು ಫೈಜ್ನಟ್ರಾಜ್, ಸುಬ್ರಹ್ಮಣ್ಯ ನಾಡಿಗೇರ್, ಶ್ರೀಮತಿ ಮಲ್ಲಮ್ಮ ಎಸ್. ಎಂ, ಶ್ರೀಮತಿ ಅನ್ನಪೂರ್ಣ ಪಾಟೀಲ್, ಶ್ರೀಮತಿ ಶಾರದ ಅಸಗೋಡು ಸೇರಿದಂತೆ ಅನೇಕ ಸಾಹಿತ್ಯಾಭಿ ಮಾನಿಗಳು ವೀಕ್ಷಕರಾಗಿ ಭಾಗವಹಿಸಿದ್ದರು.