‘ಕಲ್ಯಾಣ’ ಎನ್ನುವ ಪದವೇ ಮಂತ್ರ ಸದೃಶ

ಸಾಣೇಹಳ್ಳಿ, ಆ.5- ‘ಕಲ್ಯಾಣ’ ಎನ್ನುವ ಪದವೇ ಮಂತ್ರ ಸದೃಶವಾದುದು. ಅದಕ್ಕೊಂದು ಚುಂಬಕ ಶಕ್ತಿ ಇತ್ತು ಎಂದು ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದರು.

ಅವರು ಶಾಖಾಮಠದಲ್ಲಿ ಆಯೋಜಿಸಿರುವ ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿ ಕೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದ ಇಂದಿನ ಬೀದರ್ ಜಿಲ್ಲೆಯ ಬಸವ ಕಲ್ಯಾಣ ಬಸವಾದಿ ಶಿವಶರಣರ ಬೀಡಾಗಿತ್ತು. ಅನುಭವ ಮಂಟಪದ ಮೂಲಕ ಶರಣರು ವಚನ ಚಳುವಳಿಗೆ ಕಾರಣರಾಗಿ ಸಾಹಿ ತ್ಯಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅದ್ಭುತ ಪರಿವರ್ತನೆ ತಂದದ್ದು ಅವಿಸ್ಮರಣೀಯ ಘಟನೆಯಾಗಿದೆ ಎಂದರು.

ಶರಣ ಚಳುವಳಿ ಕೇವಲ ತಳವರ್ಗದ ಕಾಯಕ ಜೀವಿಗಳ ಚಳುವಳಿ ಎನ್ನುವ ಮಾತಿಗೆ ಅಪವಾದವಾಗಿ  ಮೇಲ್ವರ್ಗದ ಶ್ರೀಮಂತರು, ಧೀಮಂತರೂ ಇದ್ದರು. ಅಂತಹವರಲ್ಲಿ ಮಹಾಶರಣೆ ಬೋಂತಾದೇವಿ ಒಬ್ಬಳು. ಅರಮನೆಯೆಂಬ ಸೆರೆಮನೆ ತೊರೆದು ಬಂದವಳು. ಆಕೆಯ ದಿಟ್ಟತನ, ಅಧ್ಯಾತ್ಮಿಕ ಹಸಿವು, ಶಿವ ಸಾಕ್ಷಾತ್ಕಾರದ ಒಲವು ಅದ್ಭುತವಾದದ್ದು. ದೇವರ ಅನಂತತೆಯನ್ನು, ಸರ್ವಜ್ಞತ್ವವನ್ನು ವಿವರಿಸುವ ಹಾಗೆ ವಚನಗಳಿವೆ. ಅರಿವಿಗೆ ಮತ್ತು ಸ್ವತಂತ್ರಕ್ಕೆ  ಹೆಚ್ಚು ಮಹತ್ವ ನೀಡಿದೆ. ಕಾಶ್ಮೀರಿ ಶೈವದ ವಿಶಿಷ್ಟತೆಯನ್ನು ಈಕೆಯ ವಚನಗಳಲ್ಲಿ ಕಾಣಬಹುದು ಎಂದರು.

ಚಿಕ್ಕಮಗಳೂರು ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಿ.ಎಂ. ಗಣೇಶ್ ಬೋಂತಾದೇವಿ ಕುರಿತು ಮಾತನಾಡಿದರು. ಅನ್ಯಭಾಷಿಕಳಾದರೂ ಕನ್ನಡದ ಮೇಲಿನ ಭಾಷಾ ಪ್ರೌಢಿಮೆ ಉತ್ಕೃಷ್ಟವಾದದು. ವಚನಗಳಲ್ಲಿ ಬಳಸಿರುವ ಶಬ್ಧಗಳ ಚಮತ್ಕಾರ ವಿಶಿಷ್ಟವಾದದ್ದು ಎಂದು ಉದಾಹರಣೆ ಸಮೇತ ತಿಳಿಸಿದರು.

ಅಶ್ವಿನಿ ಹೆಚ್. ಲೋಹಿತ್ ಸ್ವಾಗತಿಸಿದರು. ಶಿವ ಸಂಚಾರದ ಕೆ. ಜ್ಯೋತಿ, ಕೆ. ದಾಕ್ಷಾಯಣಿ, ಹೆಚ್.ಎಸ್. ನಾಗರಾಜ್ ಮತ್ತು ತಬಲಾ ಸಾಥಿ ಶರಣ್ ತಂಡ ವಚನ ಗೀತೆ ಪ್ರಸ್ತುತ ಪಡಿಸಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.  ಎಂ.ಇ. ಸುನಂದಮ್ಮ ಮತ್ತು ದಿ.ಎನ್. ಶಂಭುಲಿಂಗಪ್ಪ ಗುಂಡಿನಮಡು ಇವರ ಮಕ್ಕಳಾದ ಎಸ್. ಮಾರುತೇಶ್ ಮತ್ತು ಸಹೋದರರು ಈ ದಿನದ ದಾಸೋಹಿಗಳಾಗಿದ್ದರು.

error: Content is protected !!