ಹರಪನಹಳ್ಳಿ, ಮಾ.19- ತಾಲ್ಲೂಕಿನ ಕಂದಾಯ ಇಲಾಖೆಯ ಅವ್ಯವಸ್ಥೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಕರವೇ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನಾ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.
ಕರವೇ ತಾಲ್ಲೂಕು ಅಧ್ಯಕ್ಷ ಬಸವರಾಜ ಹುಲಿಯಪ್ಪನವರ ಮಾತನಾಡಿ ಕಳೆದ ಒಂದು ವರ್ಷದಿಂದ ಪಹಣಿ, ಜಾತಿ ಆದಾಯ ಪ್ರಮಾಣ ಪತ್ರ, ವಂಶವೃಕ್ಷ ನೀಡುವಲ್ಲಿ ತಾಲ್ಲೂಕು ಕಚೇರಿಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಆರ್‌ಡಿ ಸಂಖ್ಯೆಗಳ ಅದಲು ಬದಲು ಮಾಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಪ್ರಮುಖವಾಗಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ ಎಂದು ಹಲವು ನ್ಯೂನತೆಗಳನ್ನು ತಿಳಿಸಿದರು.
ತಾಲ್ಲೂಕು ಕಂದಾಯ ಇಲಾಖೆ ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿ, ಮನವಿ ಸಲ್ಲಿಸಿದರು.
ಮುಖಂಡರಾದ ಸಹ ಕಾರ್ಯದರ್ಶಿ ಹೆಚ್. ಬಾಲಾಜಿ, ಗುರುಬಸವರಾಜ್, ಶರತ್, ಕೆ. ವಿಜಯ, ಪಿ. ಕರಿಬಸಪ್ಪ, ಮೇಘರಾಜ, ಕೃಷ್ಣಮೂರ್ತಿ, ಪ್ರವೀಣ್, ಜಿ. ಗೋಪಿ, ಅಶೋಕ, ಕೊಟ್ರೇಶ್, ದೊಡ್ಡಬಸಪ್ಪ, ದ್ವಾರಕನಾಥ್, ಹೆಚ್. ಸುದೀಪ್, ಜಯಪ್ರಕಾಶ್, ರಮೇಶ್ ಇನ್ನಿತರರಿದ್ದರು.