ಮಲೇಬೆನ್ನೂರು, ಮಾ.19 – ದಿನ ನಿತ್ಯ ಜೀವನದಲ್ಲಿ ಪೋಷಕರು ಮೌಲ್ಯವನ್ನು ಉಳಿಸಿಕೊಳ್ಳುತ್ತಾ ಮನೆಯ ಮಕ್ಕಳತ್ತ ಗಮನ ಹರಿಸಿ ಎಂದು ಶಿಕ್ಷಣ ಸಂಯೋಜಕ ಅಶೋಕ್ ಕಾಳೆ ಕರೆ ನೀಡಿದರು.
ಅವರು ಸಮೀಪದ ಕಡಾರನಾಯ್ಕನ ಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್‍ಡಿ ಎಂಸಿ ಸದಸ್ಯರುಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಉದ್ಘಾಟಿಸಿ ಮಾತನಾಡುತ್ತಾ, ಪೋಷಕರು ಟಿವಿಗಳ ಧಾರಾವಾಹಿಗಳಿಗೆ ದಾಸರಾಗದೇ ತಮ್ಮ ಮಕ್ಕಳನ್ನು ಮನೆಯಲ್ಲಿ ಮಾತನಾಡಿಸಿ, ರೆಪ್ಪೆಗಳು ಕಣ್ಣನ್ನು ಕಾಪಾಡುವಂತೆ ಎಸ್‍ಡಿಎಂಸಿ ಸದಸ್ಯರುಗಳು ಶಾಲೆಯನ್ನು ಕಾಪಾಡಬೇಕಿದೆ ಎಂದರು.
ಅಂಬೇಡ್ಕರ್, ವಿವೇಕಾನಂದ ಮತ್ತು ಕಲಾಂ ರವರನ್ನು ಒಬ್ಬ ಶ್ರೇಷ್ಠ ವ್ಯಕ್ತಿಯನ್ನಾಗಿಸಿದ್ದು ಒಂದು ಪುಸ್ತಕವಾಗಿದೆ, ಹಾಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸಾಲದು ಅವರ ಜತೆ ಕೂತು ಹರಟೆ ಹೊಡೆಯಿರಿ, ಪಾಠದ ಬಗ್ಗೆ ಚರ್ಚಿಸಿ, ಶಾಲೆಯಲ್ಲಿ ಕೇಳಿದ ಕಥೆಯನ್ನು ತಿಳಿಯಿರಿ ಎಂದು ಹೇಳಿದರು.
ಒಬ್ಬ ಮೇಷ್ಟ್ರು ದಡ್ಡ ವಿದ್ಯಾರ್ಥಿಯ ಬೆನ್ನ ಮೇಲೆ ಕೈ ಹಾಕಿದ್ರೆ ಸಾಕು ಅವನ ದಿನಚರಿಯೇ ಬದಲಾಗುತ್ತದೆ. ಜಾಣ ವಿದ್ಯಾರ್ಥಿಯನ್ನು ಬುದ್ದಿವಂತರನ್ನಾಗಿ ಮಾಡುವ ಬದಲು, ದಡ್ಡರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದು ತುರ್ತು ನಡೆಯಬೇಕು ಎಂದರು.
ಸಿಆರ್‍ಪಿ ಪ್ರಕಾಶ್ ಸದಸ್ಯರ ಜವಾಬ್ದಾರಿ, ಎಸ್‍ಡಿಎಂಸಿ ಕರ್ತವ್ಯ, ಮಾಸಿಕ ಸಭೆಗಳು, ಸ್ಥಳೀಯ ರಜೆ, ಇಲಾಖಾ ಸೌಲಭ್ಯಗಳು, ಹಳೇ ವಸ್ತುಗಳ ಹರಾಜು, ದಾನಿಗಳ ದಾಖಲೆ, ಶಾಲೆಯ ಲೆಕ್ಕಪತ್ರ, ಶಾಲಾ ಕೈತೋಟ, ವಿಶೇಷ ಮಕ್ಕಳಿಗೆ ಸರ್ಕಾರದ ಹಣ ಮತ್ತಿತರೆ ಮಾಹಿತಿ ತಿಳಿಸಿದರು.
ಎಸ್‍ಡಿಎಂಸಿ ಅಧ್ಯಕ್ಷ ಜಿ.ಪ್ರಭುಗೌಡ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಲೋಕೇಶ್, ತಿಪ್ಪೇಶ್, ರವಿ, ಸಿದ್ದನಗೌಡ, ಭರಮಮ್ಮ, ಸವಿತಾ, ನಜ್ಮಾ, ಸವಿತಾ ಹಾಜರಿದ್ದರು. ಪ್ರಭಾರಿ ಮುಖ್ಯ ಶಿಕ್ಷಕ ವೆಂಕಟೇಶ್‍ರಾವ್, ಶಿಕ್ಷಕರಾದ ಶಿವಣ್ಣ, ಚನ್ನವೀರಯ್ಯ ಮಾತನಾಡಿದರು.