ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

ದಾವಣಗೆರೆ, ಮಾ.17- ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ದೇಶದ ಸರ್ಕಾರಿ ಉದ್ಯಮವನ್ನು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ, ಕರ್ನಾಟಕ ಜನಶಕ್ತಿ ಮತ್ತು ಭೀಮ್‌ ಆರ್ಮಿ ಜಿಲ್ಲಾ ಸಮಿತಿ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ರೈಲ್ವೆ, ಪೆಟ್ರೋಲಿಯಂ, ವಿದ್ಯುತ್‌, ಸಾರಿಗೆ, ಶಿಕ್ಷಣ, ಬ್ಯಾಂಕ್, ವಿಮಾನ ಮುಂತಾದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಪರಭಾರೆ ಮಾಡುವುದನ್ನು ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪೆಟ್ರೋಲ್, ಡೀಸೆಲ್, ಗ್ಯಾಸ್‌, ವಿದ್ಯುತ್‌ ಬಿಲ್, ಸಾರಿಗೆ, ಶಿಕ್ಷಣ, ಆರೋಗ್ಯ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಬೇಕು, ಕೃಷಿ ಕಾರ್ಪೊರೇಟೀಕರಣ ನಿಲ್ಲಿಸಬೇಕು, ಸಹಕಾರಿ ಕೃಷಿಯನ್ನು ಪ್ರೇರೇಪಿಸಬೇಕೆಂದು ಮನವಿ ಮಾಡಿದರು.

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಕಾರ್ಮಿಕ ವಿರೋಧಿಯಾದ ಕೇಂದ್ರ ಸರ್ಕಾರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆ ಕಾಯ್ದೆಗಳನ್ನು ಹಿಂಪಡೆಯಬೇಕು, 25 ಸಾವಿರ ರೂ. ಸಮಾನ ಕನಿಷ್ಟ ವೇತನ ನಿಗದಿ ಮಾಡಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ವಿಮೆ ಹಾಗೂ ಭವಿಷ್ಯ ನಿಧಿ ಪಿಂಚಣಿ ಜಾರಿಗೆ 5000 ಕೋಟಿ  ರೂ.ಗಳನ್ನು ಮೀಸಲಿಡುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಪದಾಧಿಕಾರಿಗಳಾದ ಸತೀಶ್‌ ಅರವಿಂದ್‌, ಪಿ. ಯಲ್ಲಪ್ಪ, ಆದಿಲ್‌ಖಾನ್, ಎನ್‌. ಅಣ್ಣಪ್ಪ, ಪವಿತ್ರ, ಹನುಮಂತಪ್ಪ ಬಸವರಾಜ್, ಮಹಾಲಿಂಗಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!