ದೇಸಿ ಕ್ರೀಡೆ ಸ್ಕ್ವಾಯ್‌ಗೆ ವಿಶ್ವ ಮಾನ್ಯತೆ ಸಿಗಬೇಕು

ಹರಿಹರದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್

ಹರಿಹರ, ಮಾ.17- ನಮ್ಮ ದೇಸಿ ಕ್ರೀಡೆಯಾದ ಸ್ಕ್ವಾಯ್ ಕ್ರೀಡೆಗೆ ವಿಶ್ವ ಮಾನ್ಯತೆ ಸಿಗಬೇಕಾಗಿದೆ ಎಂದು ಮಾಜಿ ಶಾಸಕ ಹಾಗೂ ಸ್ಕ್ವಾಯ್ ಅಸೋಸಿಯೇಷನ್ ಗೌರವಾಧ್ಯಕ್ಷ ಬಿ.ಪಿ. ಹರೀಶ್ ಅಭಿಪ್ರಾಯ ಪಟ್ಟರು.

ನಗರದ ಪಿಬಿ ರಸ್ತೆಯಲ್ಲಿರುವ ಸ್ಕ್ವಾಯ್ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಭಾನುವಾರ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಮ್ಮಿಕೊಂಡಿದ್ದ  ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಸಮರ ಕಲೆಗಳಲ್ಲಿ ಸ್ಕ್ವಾಯ್ ಕ್ರೀಡೆಯು ಒಂದಾಗಿದೆ. ಈ ಕ್ರೀಡೆಯು ಸುಮಾರು 62 ದೇಶಗಳಲ್ಲಿ ಪ್ರಚಲಿತದಲ್ಲಿದೆ. ಯೋಗ ಆರೋಗ್ಯ ಮತ್ತು ಮಾನಸಿಕ ಚೈತನ್ಯ ನೀಡಿದರೆ  ಸ್ಕ್ವಾಯ್ ಆತ್ಮ ರಕ್ಷಣೆಯ ಕ್ರೀಡೆಯಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಯುವಕರು ಈ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಿರುವುದು ಹರ್ಷದಾಯಕ ವಿಷಯವಾಗಿದೆ ಎಂದರು. 

ನಗರದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಒಂದು ಸುಸಜ್ಜಿತ ಕಟ್ಟಡದ ಅವಶ್ಯಕತೆಯಿದ್ದು, ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುಲಾಗುವುದು ಎಂದರು.

ಬಂಜಾರ ಪೀಠದ ಸರ್ದಾರ್ ಸೇವಾಲಾಲ್ ಶ್ರೀಗಳು ಮಾತನಾಡಿ ಇಂದಿನ ಜೀವನ ಶೈಲಿಯಲ್ಲಿ ನಾವುಗಳು ಎಲ್ಲವನ್ನು ಜಾತಿ ಆಧಾರದಲ್ಲಿ ನೋಡು ತ್ತೇವೆ. ಅದರೆ ಕ್ರೀಡಾ  ಕ್ಷೇತ್ರದಲ್ಲಿ ಮಾತ್ರ ನಾವು ಸಾಮರಸ್ಯವನ್ನು ಕಾಣಬಹುದಾಗಿದೆ ಎಂದರು.

ಒತ್ತಡದ ಜೀವನ ಪದ್ಧತಿಯಿಂದ ನಾವುಗಳು ಉತ್ಸಾಹವನ್ನು ಕಳೆದುಕೊಂಡಿದ್ದೇವೆ. ಒತ್ತಡ ನಿಯಂತ್ರಣಕ್ಕಾಗಿ   ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳ್ಳುವುದರೊಂದಿಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನದ ಹುದ್ದೆಗಳನ್ನು ಗಳಿಸಲು ಸಹಕಾರಿಯಾಗುತ್ತದೆ ಎಂದರು.

ಸಮಾರಂಭಕ್ಕೂ ಮುನ್ನ ಜೈಪುರದ ಜಗನ್ನಾಥ್ ವಿಶ್ವವಿದ್ಯಾಲಯದಲ್ಲಿ ನಡೆದ 21ನೇ ರಾಷ್ಟ್ರೀಯ ಮಟ್ಟದ ಸ್ಕ್ವಾಯ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ವಿಜೇತರಾದ ಕ್ರೀಡಾಪಟುಗಳನ್ನು ತೆರೆದ ವಾಹನದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಕ್ವಾಯ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಜಿ.ಬಿ. ರವಿಕುಮಾರ್, ಕಾರ್ಯದರ್ಶಿ ಮಹಮ್ಮದ್ ಅಲಿ, ಖಜಾಂಚಿ ಕೆ.ಜಿ. ಗಿರೀಶ್, ಉಪಾಧ್ಯಕ್ಷ ಗಣೇಶ್ ಹತ್ಕೋಲ್, ನಂದಿಗಾವಿ ಶ್ರೀನಿವಾಸ್,  ನಗರಸಭೆಯ ನಾಮನಿರ್ದೇಶಿತ ಸದಸ್ಯರಾದ ಮಾರುತಿ ಶೆಟ್ಟಿ, ಹೆಚ್.ಎಸ್. ರಾಘವೇಂದ್ರ, ಜನಪದ ಗಾಯಕ ಉಮೇಶ್ ನಾಯ್ಕ್, ನಿಂಗರಾಜ್, ಸುಪ್ರಿಯಾ ರವಿಕುಮಾರ್,ಈಶ್ವರ ಗೌಡಗೇರಿ ಇನ್ನಿತರರಿದ್ದರು.

error: Content is protected !!