ಕಾಟಿಕ್ ಸಮಾಜವನ್ನು ಎಸ್ಸಿಗೆ ಸೇರಿಸಲು ಒತ್ತಾಯ

ಹರಿಹರ, ಮಾ.15- ಸಮಾಜದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯರಾಗಿ ಬದುಕುತ್ತಿರುವ ಮತ್ತು ಪರಿಶಿಷ್ಟ ಜಾತಿ ಸೇರಿರದ ಕಾಟಿಕ್  ಉಪ ಜಾತಿ ಗಳಾದ ಕಟುಗ, ಕಲಾಲ್, ಸೂರ್ಯವಂಶ ಕ್ಷತ್ರಿಯ, ಹಿಂದೂ ಕಲಾಲ್, ಹಿಂದೂ ಕಾಟಿಕ್, ಶೇರೆ ಗಾರ, ಅರೇಕಸಾಯಿ, ಅರೇಖಾಟಿಕಲು, ಕಸಾಬು, ಕಸಾಯಿ, ಮರಟ್ಟಿ ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ದಾವಣಗೆರೆ ಸಿಟಿ ಮತ್ತು ಹರಿಹರ ಟೌನ್ ಸಂಘದ ವತಿಯಿಂದ ತಹಸೀಲ್ದಾರ್‌ಗೆ ಮನವಿ ಅರ್ಪಿಸಲಾಯಿತು.

ಮನವಿ ಅರ್ಪಿಸಿ ಮಾತನಾಡಿದ ಮುಖಂಡರು, ಸಮಾಜದಲ್ಲಿ ಮದ್ಯ ಮತ್ತು ಮಾಂಸ ಮಾರಾಟ ಮಾಡಿ ಜೀವನ ನಡೆಸುತ್ತಿರುವ ನಮ್ಮ ಸಮಾಜದ ಜನರಿಗೆ ಆಧುನಿಕ ಸಮಾಜದಲ್ಲಿ ಯಾವುದೇ ರೀತಿಯ ಗೌರವ ಇಲ್ಲದಾಗಿದೆ. ಅಸ್ಪೃಶ್ಯರಂತೆ ನಮ್ಮನ್ನು ಕಾಣಲಾಗುತ್ತಿದೆ. ಇದನ್ನು ಮನಗಂಡು 2011 ರಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಗುರುಲಿಂಗಯ್ಯನವರಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮ, ಹೋಬಳಿ, ಪುರಸಭೆಗಳನ್ನು ಸಂಚಾರ ಮಾಡಿ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ 2012 ರಲ್ಲಿ ವರದಿ ‌ಪಡೆಯಲಾಗಿದೆ. ಸಚಿವ ಸಂಪುಟದಲ್ಲಿ ವರದಿಯನ್ನು ಪುರಸ್ಕರಿಸಿ ಕೇಂದ್ರಕ್ಕೆ ರವಾನಿಸಲು ಸಮಾಜದ ವತಿಯಿಂದ ಒತ್ತಾಯ ಮಾಡುತ್ತಿದ್ದೇವೆ ಎಂದರು.

ವಕೀಲ ನಾಗರಾಜ್ ಹಲವಾಗಲು ಮಾತ ನಾಡಿ, ರಾಜ್ಯದಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆ ದಿದ್ದರೂ ಸಹ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಕೂಡಲೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಒತ್ತಾಯಿಸಿದರು.

ತಹಸೀಲ್ದಾರ್‌ರವರ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಗ್ರೇಡ್-1 ಚನ್ನವೀರ ಸ್ವಾಮಿ ಮನವಿ ಸ್ವೀಕರಿಸಿದರು. ಈ ಸಮಯದಲ್ಲಿ ಸಂಘದ ಗೌರವ ಅಧ್ಯಕ್ಷ ರೇವಣಪ್ಪ ಖಜೂರ್‌ಕರ್, ಅಧ್ಯಕ್ಷ ಮಾಲತೇಶ್ ಕಲಾಲ್ ಪತ್ತೆಪುರಿ, ಪ್ರಧಾನ ಕಾರ್ಯದರ್ಶಿ ಏಕನಾಥ್ ತಿಲಕ್ ಬನೂಖಂಡೆ, ಹಿರಿಯ ವಕೀಲರಾದ ಶ್ರೀನಿವಾಸ್ ಕಲಾಲ್, ನಾಗರಾಜ್ ಹಲವಾಗಲ್, ಗಂಗಾರಾಮ್ ಕಲಾಲ್, ವಿರುಪಾಕ್ಷ ಕಲಾಲ್, ಸುನಿಲ್ ಕಲಾಲ್, ಮಲ್ಲಿಕಾರ್ಜುನ್ ಕಲಾಲ್, ಭಾಗೀರಥಿ ಕಲಾಲ್, ಅಕ್ಕಮಹಾದೇವಿ ಕಲಾಲ್, ರತ್ನಮ್ಮ ಕಲಾಲ್, ಗಾಯತ್ರಿ ಬಾಯಿ, ಡಾ. ಬಸವರಾಜ ಕಲಾಲ್, ರವೀಂದ್ರನಾಥ್ ಕಲಾಲ್, ಈಶ್ವರ್ ಕಲಾಲ್ ಮತ್ತಿತರರು ಹಾಜರಿದ್ದರು.

error: Content is protected !!