ಗುರುಗಳಿಗೆ ಕೃತಜ್ಞತೆ ಅರ್ಪಿಸುವ ದಿನವೇ ಗುರು ಪೂರ್ಣಿಮೆ

ಯೋಗ ತಜ್ಞ ಡಾ. ರಾಘವೇಂದ್ರ ಗುರೂಜಿ

ದಾವಣಗೆರೆ, ಆ.1- ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಎಲ್ಲಾ ಗುರುಗಳ ಶಿಷ್ಯರು ಗುರುಗಳ ಪಾದಪೂಜೆಯನ್ನು ಮಾಡಿ ಅವರಿಗೆ ಗುರುದಕ್ಷಿಣೆಯನ್ನು ಅರ್ಪಿಸುವ ದಿನವೇ  ಗುರು ಪೂರ್ಣಿಮೆಯ ವಿಶೇಷತೆಯಾಗಿದೆ. ವೇದವ್ಯಾಸರು ಹುಟ್ಟಿದ ಈ ದಿನವನ್ನು ವ್ಯಾಸ ಪೂರ್ಣಿಮೆಯಂತಲೂ ಕರೆಯಲಾಗಿದೆ. ಗುರು ಪರಂಪರೆಯಲ್ಲಿ ವೇದವ್ಯಾಸರು ಸರ್ವಶ್ರೇಷ್ಠ ಗುರು ಎಂದು ಪರಿಗಣಿಸಲಾಗಿದೆ ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೋಗ ಗುರು ಡಾ|| ರಾಘವೇಂದ್ರ ಗುರೂಜಿ ತಿಳಿಸಿದರು.

ನಗರದ ಆದರ್ಶ ಯೋಗ ಪ್ರತಿಷ್ಠಾನ, ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಗುರುಪೂರ್ಣಿಮೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಗುರು ಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗುರು ಪೂರ್ಣಿಮೆಯನ್ನು ಆಷಾಢ ಹುಣ್ಣಿಮೆಯೆಂದು ಆಚರಿಸಲಾಗುತ್ತದೆ. ಈ ದಿನದಂದು ಗುರುತತ್ವವು ಇತರ ದಿನಗಳ ತುಲನೆಯಲ್ಲಿ ಒಂದು ಸಾವಿರಪಟ್ಟು ಹೆಚ್ಚು ಕಾರ್ಯನಿರ್ವಹಿಸುತ್ತದೆ. ಗುರುವಿನ ಶಕ್ತಿ ಸಾವಿರಪಟ್ಟು ಹೆಚ್ಚಿರುತ್ತದೆ. ಆದ್ದರಿಂದ ಗುರು ಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ. ಗುರುಶಿಷ್ಯರ ಶ್ರೇಷ್ಠತೆಯ ಪರಂಪರೆಯನ್ನು ಸಾರುವ ದಿನವೇ ಗುರು ಪೂರ್ಣಿಮೆ ಆಗಿದೆ ಎಂದು ವಿವರಿಸಿದರು.

ಸ್ವತಂತ್ರ ಪೂರ್ವದಲ್ಲಿಯೇ ಸೇವೆ, ಸೇವೆ, ಸೇವೆ ಎಂಬ ದಿವ್ಯ ಮಂತ್ರದೊಂದಿಗೆ ಮಲ್ಲಾಡಿಹಳ್ಳಿ ಎಂಬ ಕುಗ್ರಾಮದಲ್ಲಿ ಅನಾಥ ಸೇವಾಶ್ರಮವನ್ನು ಕಟ್ಟಿ ದೀನ ದಲಿತರ ಆರೋಗ್ಯ ಸೇವೆಯನ್ನು ಮಾಡುತ್ತಾ, `ಅನಾಥೋ ದೈವ ರಕ್ಷಕ’ ವೆಂಬಂತೆ ಅನಾಥರ ಬಾಳಿನ ದಿವ್ಯಜ್ಯೋತಿಯಾಗಿ ಆಯುರ್ವೇದ, ಶಿಕ್ಷಣ, ಸಾಹಿತ್ಯ, ನಾಟಕ ಮತ್ತು ವಿಶೇಷವಾಗಿ ಯೋಗ ವಿದ್ಯೆಯನ್ನು ನಾಡಿನ ಉದ್ದಗಲಕ್ಕೂ ಪಸರಿಸಿದ ಪುಣ್ಯಜೀವಿ ಮಹಾಯೋಗಿ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಕೇವಲ ತಮ್ಮ ಜೋಳಿಗೆಯ ಪವಾಡದಿಂದ ನಿಷ್ಕಾಮ ಸೇವೆಯನ್ನು ಸಲ್ಲಿಸಿದ್ದರು ಎಂದು ಶ್ರೀಗಳ ಗುರು ಕಾರುಣ್ಯವನ್ನು ಗುರೂಜಿ ಸ್ಮರಿಸಿದರು. 

ಜಗತ್ಪ್ರಸಿದ್ಧ ಯೋಗ ಗುರುಗಳಾದ ಪದ್ಮಭೂಷಣ ಡಾ. ಬಿ.ಕೆ.ಎಸ್. ಅಯ್ಯಂಗಾರ್ ಅವರ ಶಿಷ್ಯ ವರ್ಗದವರಾದ ಮುರಳೀಧರ (ಬೆಂಗಳೂರು), ಕರುಣಾಕರ ಉಪಾಧ್ಯಾಯ (ಪುತ್ತೂರು), ಅರವಿಂದು ಬಾ.ಸು. (ಶಿವಮೊಗ್ಗ) ಮತ್ತು ನಗರದ ಹಿರಿಯ ಯೋಗ ಗುರುಗಳಾದ ಎ. ರಾಮಸ್ವಾಮಿ, ಕೆ. ವಿಠ್ಠಲ್‍ದಾಸ್ ಶೆಣೈ, ಜೆ. ಕಾಳಪ್ಪ  (ದಾವಣಗೆರೆ) ಹೀಗೆ ಗುರುಪರಂಪರೆಯನ್ನು ಸ್ಮರಿಸಿ, ಅವರಿಗೆ ಕೃತಜ್ಞತೆ ಅರ್ಪಿಸಿದರು.

ಸಿದ್ದಾಪುರ ತಾಲ್ಲೂಕಿನ ಹಸ್ರಗೋಡನ ಅಧ್ಯಾತ್ಮಿಕ ಚಿಂತಕರೂ, ಸ್ವರ್ಣವಲ್ಲಿ ಮಠದ ಕಾರ್ಯಕರ್ತರೂ ಆದ ಈಶ್ವರ ಶ್ರೀಪತಿಭಟ್ ಹಾಗೂ ಹರವಿಯ ಕೃಷ್ಣ ಗ್ರಾಮೀಣ ಬ್ಯಾಂಕ್‍ನ ಫಕ್ಕೀರಪ್ಪ ಕಣವಿಯವರು ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು. 

ಹರಿಹರದ ಅಂಚೆ ಕಛೇರಿಯ ಉದ್ಯೋಗಿ ಶ್ರೀಮತಿ ವೇದಾವತಿ, ಎಸ್.ವಿ.ಷಣ್ಮುಖ, ಮುಖೇಶ್ ದೇವ್, ಪೃಥ್ವಿದೇವ್, ಎಂ.ಎಂ. ಪ್ರಶಾಂತ್, ಎ.ಗುರುಪ್ರಸಾದ್, ಶ್ರೀಮತಿ ಪಿ.ಎಂ. ಶೋಭಾ, ಕೊಟ್ರೇಶಪ್ಪ ಕಡೇಕೊಪ್ಪ, ಅಭಿಯಂತರ ಎಸ್. ಮರುಳಸಿದ್ದೇಶ್ವರ, ಸಹಾಯಕ ಕೆ.ಚೇತನ್‍ಕುಮಾರ್ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!