ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ ಚಾಲನೆ
ದಾವಣಗೆರೆ, ಮಾ.13- ಮಕ್ಕಳನ್ನು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತರನ್ನಾಗಿ ಮಾಡಿ ಯಾಂತ್ರೀಕೃತವಾಗಿ ಬೆಳೆಸುತ್ತಿರುವು ದರಿಂದ ನಗರ ಪ್ರದೇಶಗಳಲ್ಲಿ ಕ್ರೀಡೆ ನಿಧಾನವಾಗಿ ಮರೆಯಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ ಶಶಿಧರ್ ಬೇಸರಿಸಿದರು.
ಅವರು, ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಶ್ರೀ ಸಿದ್ದೇಶ್ವರ ಪದವಿ ಪೂರ್ವ ಕಾಲೇಜು ಮತ್ತು ದಿ ಟೀಮ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಆರಂಭವಾದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಓದು, ಅಂಕ ಗಳಿಕೆಗೆ ಸೀಮಿತವಾಗಿ ರುವ ಕಾರಣ ನಗರ ಪ್ರದೇಶದ ವಿದ್ಯಾರ್ಥಿ ಗಳಲ್ಲಿ ಕ್ರೀಡಾಸಕ್ತಿ ಮರೆಯಾಗಿದ್ದು, ಕ್ರೀಡೆಯ ಮಹತ್ವದ ಅರಿವಿಲ್ಲವಾಗಿದೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಯಾವ ಕ್ರೀಡೆಯ ಬಗ್ಗೆ ಆಸಕ್ತಿ ಇದೆಯೋ ಅದನ್ನು ಗುರುತಿಸಿ, ಪ್ರೋತ್ಸಾಹ ನೀಡಿದರೆ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯವಾಗಿರುವುದರಿಂದ ಶಿಕ್ಷಣದ ಜೊತೆಗೆ ಕ್ರೀಡೆಗೂ ವಿದ್ಯಾರ್ಥಿಗಳು ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.
ಆಟ ಎಂದ ಮೇಲೆ ಸೋಲು, ಗೆಲುವು ಸಹಜ. ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಸೋತವರು ಯಾವುದೇ ಕಾರಣಕ್ಕೂ ಎದೆ ಗುಂದದೇ ಸೋಲನ್ನೆ ಗೆಲುವಿನ ಸೋಪಾನ ಎಂದು ಭಾವಿಸಿಕೊಂಡು ಸತತ ಪ್ರಯತ್ನ ನಡೆಸಿ ಮುಂದೆ ಗೆಲ್ಲುವ ಗುರಿ ಹೊಂದುವುದರ ಜೊತೆಗೆ ಈಗ ಗೆದ್ದವರಿಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಯಾವುದೇ ಒಬ್ಬ ಮನುಷ್ಯನ ಯಶಸ್ಸು ಆರೋಗ್ಯದ ಮೇಲೆ ನಿಂತಿರುತ್ತದೆ. ಆದ್ದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಹರಿಸಬೇಕಾದ ಅವಶ್ಯಕತೆ ಇದೆ. ಇದಾಗಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸುವಿಕೆ ಅತಿ ಮುಖ್ಯವಾಗಿದೆ. ಆದರೆ, ಮೊಬೈಲ್ ನಲ್ಲೇ ಗೇಮ್ ಆಡುತ್ತಾ ಮಕ್ಕಳು ದೈಹಿಕ ಚಟುವಟಿಕೆಯಾದ ಕ್ರೀಡೆಯಿಂದ ದೂರ ಉಳಿಯುತ್ತಾ, ತಮ್ಮ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನೇ ಕಾಣುತ್ತಿಲ್ಲ. ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಿ ಸದೃಢರಾಗುವಂತೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಕ್ರೀಡಾ ಪಟುಗಳು ಸೋಲು-ಗೆಲುವನ್ನು ಸಮಚಿತ್ತ ದಿಂದ ಸ್ವೀಕರಿಸಬೇಕು. ಇಲ್ಲಿ ಆಟವಾಡಲು ಬಂದಿರುವ ಕ್ರೀಡಾಪಟುಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವವರು ಜಿಲ್ಲೆಗೆ ಪ್ರಥಮ ಸ್ಥಾನ ತರಬೇಕು ಎಂದು ಶುಭ ಹಾರೈಸಿದರು.
ಪಿಯುಸಿ ಪರೀಕ್ಷೆ ಸಮೀಪಿಸುತ್ತಿದ್ದು, ಚೆನ್ನಾಗಿ ಓದಿ ಪರೀಕ್ಷೆ ಬರೆದು ಹೆಚ್ಚು ಅಂಕಗಳನ್ನು ಗಳಿಸಿ ನಿಮ್ಮ ಕಾಲೇಜು, ತಂದೆ-ತಾಯಿಗೆ ಮತ್ತು ಜಿಲ್ಲೆಗೆ ಉತ್ತಮ ಫಲಿತಾಂಶ ತರಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ಪಿಯುಸಿ ಕಾಲೇಜಿನ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು. ಓಟದ ಸ್ಪರ್ಧೆ, ಜಾವಲಿನ್ ಸೇರಿದಂತೆ ಸುಮಾರು 20 ಅಥ್ಲೆಟಿಕ್ಸ್ ಆಟಗಳು ನಡೆದವು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಉಮಾ ಪ್ರಕಾಶ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗರಾಜಪ್ಪ.ಆರ್, ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಕೆ.ಎಸ್. ಕರ್ನಾಟಕ ರಾಜ್ಯ ಪಿಯು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸಿ.ಬಿ. ರವಿ, ನಿವೃತ್ತ ಕ್ರೀಡಾ ಸಂಯೋಜಕ ಕೆ.ಎಂ. ಪರಮೇಶ್ವರಪ್ಪ, ಇ.ಎಂ. ಸಂತೋಷ, ಸಿದ್ದೇಶ್ವರ ಪಿಯು ಕಾಲೇಜು ಪ್ರಾಚಾರ್ಯ ಕೆ.ಎಂ. ಮಂಜುನಾಥ್ ಇದ್ದರು.