ಮಲೇಬೆನ್ನೂರು, ಮಾ.13- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಇಂದಿನಿಂದ ಒಂದು ವಾರ ಕಾಲ ಜರುಗುವ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧ ರಾಮೇಶ್ವರ ಸ್ವಾಮಿಗಳು ನಂದಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಶ್ರೀಗಳು ಆಶೀರ್ವಚನ ನೀಡಿ, ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮೂಲ ಗದ್ದುಗೆ ಇದಾಗಿದ್ದು, ಭಕ್ತರು ಭಕ್ತಿ ಮೂಲಕ ತಮ್ಮ ಇಷ್ಟಾರ್ಥ ಗಳನ್ನು ಈಡೇರಿಸಿಕೊಳ್ಳ ಬಹುದು. ಇತ್ತೀಚೆಗೆ ಹಣ ವಸೂಲಿಗಾಗಿ ಬೇರೆ ಕಡೆಗಳಲ್ಲಿ ಅಜ್ಜಯ್ಯನ ಗದ್ದುಗೆ ನಿರ್ಮಿಸಿಕೊಂಡಿ ದ್ದಾರೆ. ಭಕ್ತರು ಮೋಸ ಹೋಗಬಾರದೆಂದು ಶ್ರೀಗಳು ಮನವಿ ಮಾಡಿದರು.
ನಂದಿಗುಡಿ ಮತ್ತು ಉಕ್ಕಡಗಾತ್ರಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಬಹಳ ವರ್ಷಗಳ ಹಿಂದೆ ನಂದಿಗುಡಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ಉಕ್ಕಡಗಾತ್ರಿಗೆ ಬಂದು ತನ್ನ ಪವಾಡಗಳ ಮೂಲಕ ಸುಕ್ಷೇತ್ರವನ್ನಾಗಿಸಿ, ಇಲ್ಲಿಯೇ ಸಮಾಧಿಯಾಗಿ ಭಕ್ತರ ಮನದಲ್ಲಿ ನೆಲೆಸಿದ್ದಾರೆ.
ಪುಣ್ಯಕ್ಷೇತ್ರವಾಗಿರುವ ಉಕ್ಕಡಗಾತ್ರಿಯಲ್ಲಿ ಸರ್ಕಾರ ಹಾಗೂ ಟ್ರಸ್ಟ್ ಕಮಿಟಿಯವರು ಭಕ್ತರ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಗಳಾಗಿವೆ. ಕೊರೊನಾ ಕಾರಣದಿಂದಾಗಿ ಈ ವರ್ಷ ಜಾತ್ರೆಯನ್ನು ಸರಳ ರೀತಿಯಲ್ಲಿ ಆಚರಿ ಸುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿ ಸದೆ, ತಾವಿದ್ದಲ್ಲಿಯೇ ಅಜ್ಜಯ್ಯನ ಸ್ಮರಣೆ ಮಾಡಿ ಕೊಳ್ಳಬೇಕೆಂದು ಸ್ವಾಮೀಜಿ ಕರೆ ನೀಡಿದರು.
ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗಿದೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆಯವರು ವಿಶೇಷ ನಿಗಾ ವಹಿಸಿದ್ದಾರೆ ಎಂದು ಸುರೇಶ್ ಹೇಳಿದರು.
ಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕೆ ಈಗಾಗಲೇ 350 ಕೊಠಡಿಗಳಿದ್ದು, ಹೆಚ್ಚುವರಿಯಾಗಿ 70 ಕೊಠಡಿಗಳನ್ನು ನಿರ್ಮಿಸಲಾಗುವುದು. ಸಿಬ್ಬಂದಿಗಳಿಗೆ 18 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಭಕ್ತರು ಬೇರೆ ಯಾರ ಕೈಯಲ್ಲೂ ಕಾಣಿಕೆ ನೀಡದೆ, ನೇರವಾಗಿ ಬಂದು ಕಾಣಿಕೆ ಸಲ್ಲಿಸಬೇಕು. ಇಲ್ಲದಿದ್ದರೆ ಟ್ರಸ್ಟ್ ಖಾತೆಗೆ ಜಮಾ ಮಾಡಬೇಕೆಂದು ಸುರೇಶ್ ಮನವಿ ಮಾಡಿದರು.
ಟ್ರಸ್ಟ್ ಸದಸ್ಯ ಜಿಗಳಿ ಇಂದೂಧರ್ ಮಾತನಾಡಿ, ಉಕ್ಕಡಗಾತ್ರಿ ಅಭಿವೃದ್ಧಿಗೆ ಎಲ್ಲಾ ಸರ್ಕಾರಗಳು ಸ್ಪಂದಿಸಿವೆ. ತುಂಗಭದ್ರಾ ನದಿಗೆ ನೀರಾವರಿ ಇಲಾಖೆಯಿಂದ 4ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆದಿದ್ದು, ಮುಂದಿನ ದಿನಗಳಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನದಿ ದಡದಲ್ಲಿ ತಂಗುದಾಣ ಸೇರಿದಂತೆ ಕಾಮಗಾರಿಗಳನ್ನು ಸರ್ಕಾರದ ಅನುದಾನದಲ್ಲಿ ಮಾಡಿಸಲಾಗುವುದು ಎಂದರು.
ಟ್ರಸ್ಟ್ ಸದಸ್ಯರಾದ ಗದಿಗೆಪ್ಪ ಹೊಸಳ್ಳಿ, ಗದಿಗೆಯ್ಯ ಪಾಟೀಲ್, ನಾಗರಾಜ್ ದಿಲ್ಲಿವಾಲಾ, ಪ್ರಕಾಶ್, ಬಸವನಗೌಡ, ವೀರನಗೌಡ, ವೀರಭದ್ರಪ್ಪ, ರಾಜು ಮತ್ತು ಗ್ರಾಮದ ವಿಷ್ಣುಗೌಡ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಕ್ತರ ಆಗಮನ: ಜಾತ್ರೆಗೆ ಭಕ್ತರು ಆಗಮಿಸುತ್ತಿದ್ದು, ಸಂಖ್ಯೆ ಕಡಿಮೆ ಎನ್ನಲಾಗಿದೆ. ದೇವಸ್ಥಾನದ ಕೊಠಡಿಗಳು ಭರ್ತಿ ಆಗಿರುವುದರಿಂದ ಜನರು ತೋಟ-ಹೊಲಗಳಲ್ಲಿ ಮತ್ತು ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಬಿಡಾರ ಹಾಕಿದ್ದಾರೆ.
ಇಂದು ರಥೋತ್ಸವ: ಅಜ್ಜಯ್ಯನ ರಥೋತ್ಸವ ಇಂದು ಬೆಳಿಗ್ಗೆ 8.30 ಕ್ಕೆ ಜರುಗ ಲಿದ್ದು, ನಂದಿಗುಡಿ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.