ಮಲೇಬೆನ್ನೂರಿನ ಈಶ್ವರೀಯ ವಿವಿ ಕಾರ್ಯಕ್ರಮದಲ್ಲಿ ಬಿ.ಕೆ. ಗಂಗಾಂಬಿಕೆ
ಮಲೇಬೆನ್ನೂರು, ಮಾ.13- ದೇವರ ಬಗ್ಗೆ ಮನುಷ್ಯರಾದ ನಾವು ಗೊಂದಲದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದೇವೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಮುಂಡಗೋಡು ಕೇಂದ್ರದ ಬಿ.ಕೆ. ಗಂಗಾಂಬಿಕೆ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಜಾಗರಣೆ ಕಾರ್ಯಕ್ರಮದಲ್ಲಿ ಸತ್ಯ ಶಿವರಾತ್ರಿ ಸಂದೇಶ ಕುರಿತು ಅವರು ಮಾತನಾಡಿದರು.
ದೇವನೊಬ್ಬ ನಾಮ ಹಲವು ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಶಿವ ಪರಮಾತ್ಮ ಈ ಜಗದ ಒಡೆಯನಾಗಿರುವಾಗ ನಾವೇಕೆ ಗೊಂದಲ ಮಾಡಿಕೊಳ್ಳಬೇಕೆಂದು ಪ್ರಶ್ನಿಸಿದ ಗಂಗಾಂಬಿಕೆ ಅಕ್ಕನವರು, ಶಿವ ಪರಮಾತ್ಮ ಸರ್ವಮಾನ್ಯ. ಅವನು ಯಾರಿಗೂ ಸೀಮಿತವಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.
ಅಜ್ಞಾನದ ಕತ್ತಲೆಯಲ್ಲಿರುವ ನಾವು ಕಣ್ಣಿದ್ದೂ ಅಂಧರಾಗಿದ್ದೇವೆ. ಇದರಿಂದ ಹೊರ ಬರಬೇಕಾದರೆ, ನಾವು ಮೊದಲು ಜ್ಞಾನವೆಂಬ ಅರಿವಿನ ಬೆಳಕು ಮೂಡಿಸಿಕೊಳ್ಳಬೇಕು. ಕೇವಲ ಉಪವಾಸದಿಂದ ಶಿವರಾತ್ರಿ ಆಗುವುದಿಲ್ಲ. ಪರಮಾತ್ಮ ನೀಡಿದ ಜ್ಞಾನದ ಅರಿವನ್ನು ನಾವು ತಿಳಿದುಕೊಂಡಾಗ ಸತ್ಯ ಶಿವರಾತ್ರಿ ಆಗುತ್ತದೆ ಎಂದು ಗಂಗಾಂಬಿಕೆ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಹರಪನಹಳ್ಳಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಶರಣಪ್ಪ ವೇದಿಕೆಯಲ್ಲಿದ್ದರು. ಬಿ. ಪಂಚಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಅಮರ ಗೀತಾ ತಂಡದ ಬಿ.ಕೆ. ಭವಾನಿ, ಬಿ.ಕೆ. ತಿಪ್ಪಯ್ಯ ಅವರ ಗಾಯನ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಬಿ.ಕೆ. ಮಂಜುಳಾಜೀ ಸ್ವಾಗತಿಸಿದರು. ಬಿ.ಕೆ. ಸಾವಿತ್ರಕ್ಕ ವಂದಿಸಿದರು.