`ಪೊಲೀಸರೊಂದಿಗೆ ಓಟ’ ಕಾರ್ಯಕ್ರಮದಲ್ಲಿ ಮೇಯರ್ ಎಸ್.ಟಿ. ವೀರೇಶ್
ದಾವಣಗೆರೆ, ಮಾ.13- ಜಿಲ್ಲಾ ಪೋಲಿಸ್ ಇಲಾಖೆಯಿಂದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಶನಿವಾರ ಮುಂಜಾನೆ ನಗರದಲ್ಲಿ ಪೊಲೀಸರೊಂದಿಗೆ ಓಟ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜೊಂಬಾ ನೃತ್ಯ ಪ್ರದರ್ಶನದ ನಂತರ ನಗರದ ಜಯದೇವ ವೃತ್ತದಿಂದ ಪೂರ್ವವಲಯ ಐಜಿಪಿ ಎಸ್. ರವಿ, ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ಮ್ಯಾರಥಾನ್ ಆರಂಭಗೊಂಡಿತು.
ಪುರುಷರಿಗೆ 10 ಕಿ.ಮೀ. ಮಹಿಳೆಯರಿಗೆ 5 ಕಿ.ಮೀ.ನಂತೆ ನಡೆದ ಓಟವನ್ನು ಜಿಲ್ಲಾ ಪೊಲೀಸ್ ಸಿಬ್ಬಂದಿ, ತರಬೇತಿಯಲ್ಲಿರುವ ಪೊಲೀಸ್ ಅಭ್ಯರ್ಥಿಗಳು, ಚಿತ್ರದುರ್ಗ ಮತ್ತು ಹಾವೇರಿ ಪೊಲೀಸ್ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಿದರು.
ಜಯದೇವ ವೃತ್ತದಿಂದ ಆರಂಭಗೊಂಡು ಗಾಂಧಿ ವೃತ್ತ, ಪಿಬಿ ರಸ್ತೆಯಿಂದ ಬಾಪೂಜಿ ಸಮುದಾಯ ಭವನದಿಂದ ಬಿಐಇಟಿ ಕಾಲೇಜು ರಸ್ತೆಯಿಂದ ನೂತನ ಕಾಲೇಜು, ಡೆಂಟಲ್ ಕಾಲೇಜು, ಗುಂಡಿ ರಸ್ತೆಯಿಂದ ವಿದ್ಯಾರ್ಥಿ ಭವನದಿಂದ ಸಾಗಿ ಜಯದೇವ ವೃತ್ತಕ್ಕೆ ಬಂದು ಕೊನೆಗೊಂಡಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮ್ಯಾರಥಾನ್ ನಲ್ಲಿ ವಿಜೇತರಾದವರಿಗೆ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿ ವಿತರಿಸಲಾಯಿತು.
ಪೂರ್ವವಲಯ ಐಜಿಪಿ ಎಸ್.ರವಿ ಮಾತನಾಡುತ್ತಾ, ಓಟ ಒಂದು ಕಲೆ, ವಿಜ್ಞಾನವಾಗಿದೆ ಎಂದರು. ದಾವಣಗೆರೆಯಲ್ಲಿ ಇಂದು ಸ್ಟಾರ್ಟ್ ಆಗಿದೆ. ಇಲ್ಲಿಯೂ ಕೂಡಾ ಇಂತಹ ಇವೆಂಟ್‌ಗಳು ಹೆಚ್ಚೆಚ್ಚು ಆಗಬೇಕು. ದಾವಣಗೆರೆ ಕೂಡಾ ಗುರುತಿಸಿಕೊಳ್ಳುವಂತಹ ಕ್ಯಾಪಿಟಲ್ ಆಗಬೇಕು ಎಂದು ಆಶಿಸಿದರು.
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಎಸ್.ಟಿ.ವೀರೇಶ್ ಮಾತನಾಡಿ, ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಬ್ಬ ಹರಿದಿನಗಳಲ್ಲೂ ಹಗಲು ರಾತ್ರಿ ಎನ್ನದೇ ರಕ್ಷಣೆಯ ಕೆಲಸ ಮಾಡುತ್ತಾರೆ. ಪ್ರತಿಯೊಬ್ಬರೂ ಸಹಾ ಕಾನೂನನ್ನು ಪಾಲನೆ ಮಾಡಿದರೆ ಅವರೂ ಸಹಾ ನಮ್ಮಂತೆ ತಮ್ಮ ತಮ್ಮ ಕುಟುಂಬದವರೊಂದಿಗೆ ಹಬ್ಬ ಹರಿದಿನಗಳನ್ನು ಆಚರಿಸಲು ಸಾಧ್ಯವಾಗುತ್ತದೆ ಎಂದರು.
ಎಸ್ಪಿ ಹನುಮಂತರಾಯ ಮಾತನಾಡಿ, ಇದು ಪ್ರಥಮ ಬಾರಿಗೆ ಪೊಲೀಸರೊಂದಿಗೆ ಓಟ ಕಾರ್ಯಕ್ರಮ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಮೂರು ಅಥವಾ ಆರು ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮ ನಡೆಸುವಂತೆ ಸಾರ್ವಜನಿಕರಿಂದ ಸಲಹೆಗಳು ಬಂದಿದ್ದಾಗಿ ಹೇಳಿದರು.
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಮಾತನಾಡಿ, ಐಜಿ ಅವರ ನಿರ್ದೇಶನದ ಮೇರೆಗೆ ಚಿತ್ರದುರ್ಗದಲ್ಲಿಯೂ ಮ್ಯಾರಥಾನ್ ಮಾಡುವುದಾಗಿ ಹೇಳಿದರು.
ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಎಸ್.ರವಿ, ಎಸ್ಪಿ ಹನುಮಂತರಾಯ ಮಾತನಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ರಾಜೀವ್, ಹಾವೇರಿ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲ್ದಂಡೆ, ರಿದಂ ಫಿಟ್‌ನೆಸ್ ತಂಡದ ಅನಿಲ್, ಕರ್ನಾಟಕ ರಾಜ್ಯ ಅಂಗವಿಕಲರ ಆರ್‌ಪಿಡಿ ಟಾಸ್ಕ್‌ಫೋರ್ಸ್ ಸಮಿತಿ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.