ಅಶೋಕ ರಸ್ತೆ ಗುಂಡಿಗಳ ಸಮಸ್ಯೆಗೆ ತಿಂಗಳಲ್ಲಿ ಶಾಶ್ವತ ಪರಿಹಾರ

ತಾತ್ಕಾಲಿಕವಾಗಿ ರಸ್ತೆ ರಿಪೇರಿ: ಮೇಯರ್ ಎಸ್.ಟಿ. ವೀರೇಶ್

ದಾವಣಗೆರೆ ನಗರದಲ್ಲಿ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೂ ಗಾಂಧಿ ವೃತ್ತದಿಂದ ರೈಲ್ವೇ ಗೇಟ್ ವರೆಗಿನ ತುಂಡು ರಸ್ತೆ ಮಾತ್ರ ರಿಪೇರಿ ಭಾಗ್ಯ ಕಂಡಿರಲಿಲ್ಲ. ಮಳೆಗಾಲದಲ್ಲಂತೂ
ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೀವ್ರತರವಾದ ತೊಂದರೆಯಾಗುತ್ತಿತ್ತು. ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿದ್ದವು.

ದಾವಣಗೆರೆ, ಜು.26- ನಗರದ ಮಹಾತ್ಮ ಗಾಂಧಿ ವೃತ್ತದಿಂದ ರೈಲ್ವೇ ಗೇಟ್ ವರೆಗಿನ ಅಶೋಕ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಮಾಡಿ, ಫುಟ್ ಪಾತ್ ಹಾಗೂ ಸ್ಟ್ರೀಟ್ ಲೈಟ್ ಅಳವಡಿಸುವ ಕಾಮಗಾರಿಯನ್ನು ಒಂದು ತಿಂಗಳೊಳಗೆ ಆರಂಭಿಸುವುದಾಗಿ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹೇಳಿದ್ದಾರೆ.

ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಹಾಗೂ ರೈಲ್ವೇ ಇಲಾಖೆಯ ಎಂಜಿನಿಯರ್‌ಗಳೊಂದಿಗೆ ಸೋಮವಾರ ರಸ್ತೆ ಪರಿಶೀಲನೆ ನಡೆಸಿ ಚರ್ಚಿಸಿದ ನಂತರ ಅವರು `ಜನತಾವಾಣಿ’ಯೊಂದಿಗೆ ಮಾತನಾಡಿದರು.

ಕಳೆದ ಎರಡು ದಶಕಗಳ ಸಮಸ್ಯೆ ಇದಾಗಿದ್ದು, ರೈಲ್ವೇ ಅಂಡರ್ ಪಾಸ್ ನಿರ್ಮಾಣ ಸೇರಿದಂತೆ ವಿವಿಧ ಕಾರ ಣಗಳಿಂದಾಗಿ  ರಸ್ತೆ ಅಭಿವೃದ್ಧಿಯಾಗಿರಲಿಲ್ಲ. ಇಷ್ಟು ದಿನಗಳ ಕಾಲ ಈ ರಸ್ತೆಯನ್ನು ಯಾರು ರಿಪೇರಿ ಮಾಡಬೇಕೆಂಬ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಮಹಾನಗರ ಪಾಲಿಕೆ ಎಂಜಿನಿಯರ್‌ಗಳೊಂದಿಗೆ ರಸ್ತೆ ಪರಿಶೀಲನೆ ನಡೆಸಿದ್ದೆ. ಇಂದು ಮತ್ತೊಮ್ಮೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಚರ್ಚಿಸಲಾಗಿದೆ.

ಸದ್ಯಕ್ಕೆ ಪಿಡಬ್ಲ್ಯೂಡಿ ಇಲಾಖೆಯಿಂದ ರಸ್ತೆಯಲ್ಲಿನ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗುವುದು. ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ನಿರ್ಮಾಣವಾಗುತ್ತಿರುವ ಖಾಸಗಿ ಬಸ್ ನಿಲ್ದಾಣದ ಪೈಪ್ ಲೈನ್ ಕಾಮಗಾರಿಯು ಇದೇ ರಸ್ತೆ ಮೂಲಕ ನಡೆಯಬೇಕಿದ್ದು, ಆ ನಂತರವೇ ಸಿಮೆಂಟ್ ರಸ್ತೆಯ ಕಾಮಗಾರಿ ಆರಂಭವಾಗಲಿದೆ. ಪಾದಚಾರಿಗಳಿಗೆ ಅನುಕೂಲವಾಗುವಂತೆ ಫುಟ್ ಪಾತ್ ನಿರ್ಮಿಸಿ, ಬೀದಿ ದೀಪಗಳನ್ನೂ ಅಳವಡಿಸುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಒಂದು ತಿಂಗಳಲ್ಲಿ ಶಾಶ್ವತ ಪರಿಹಾರದ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಸುಮಾರು 18 ಮೀಟರ್ ಅಗಲ, 80 ಮೀಟರ್ ಉದ್ದದ ಈ ರಸ್ತೆಯಲ್ಲಿ ಸದಾ ನೀರು ನಿಂತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಲೋಕೋಪಯೋಗಿ ಇಲಾಖೆಯು ತಾತ್ಕಾಲಿಕವಾಗಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಿದೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹೇಳಿದರು.

ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾಪ್ರಕಾಶ್, ಮುಖಂಡರಾದ ಎ.ವೈ.ಪ್ರಕಾಶ್, ರಮೇಶ್, ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ಮಹಾದೇವ್ ಮುಂತಾದವರು ರಸ್ತೆ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.

error: Content is protected !!