ಒಳ ಮೀಸಲಾತಿಗಾಗಿ ಯಾವುದೇ ಹಂತದ ಹೋರಾಟಕ್ಕೂ ಸಿದ್ಧರಾಗಬೇಕು

ಮಲೇಬೆನ್ನೂರಿನಲ್ಲಿ ದಸಂಸ ಸಂಚಾಲಕ ಮಹಾಂತೇಶ್‌

ಮಲೇಬೆನ್ನೂರು, ಮಾ.6-  ಸಾಮಾಜಿಕ ನ್ಯಾಯಪರ ಒಳ ಮೀಸಲಾತಿ ಪಡೆಯಲು ಯಾವುದೇ ಹಂತದ ಹೋರಾಟಕ್ಕೂ ಸಿದ್ಧರಾಗಬೇಕೆಂದು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಹೇಳಿದರು.

ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಗೆ ಆಗ್ರಹಿಸಿ ಹರಿಹರದಿಂದ ಇದೇ ದಿನಾಂಕ 25ರಂದು ಆರಂಭವಾಗುವ ಬೆಂಗಳೂರು ವರೆಗಿನ ಪಾದಯಾತ್ರೆಗಾಗಿ ಮಲೇಬೆನ್ನೂರಿನಲ್ಲಿ ಇಂದು ನಡೆದ ಮಾದಿಗ ಸಮಾಜದ ಹೋಬಳಿ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಲವು ದಶಕಗಳ ಹೋರಾಟದ ಬಳಿಕ ಡಾ.ಅಂಬೇಡ್ಕರ್‍ ಅವರು ಸಂವಿಧಾನ ರಚನೆ ಮಾಡುವ ಅವಕಾಶ ಪಡೆದು ದಮನಿತರಿಗೆ ಮೀಸಲಾತಿ ದೊರಕಿಸಿದರು. ಒಳ ಮೀಸಲಾತಿಗೆ 3 ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ಈ ಸಮುದಾಯದ ಯುವಕರ ಮೇಲಿದೆ ಎಂದರು.

ಒಳ ಮೀಸಲಾತಿಯ ಧ್ವನಿ ಮೊದಲ ಬಾರಿ ಎತ್ತಿದ ಕೀರ್ತಿ ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರಿಗೆ ಸಲ್ಲುತ್ತದೆ. ಆ ಕಾರಣದಿಂದ ಅವರ ಹುಟ್ಟೂರಾದ ಹರಿಹರದಿಂದಲೇ ಪಾದಯಾತ್ರೆ ಆರಂಭಿಸಲು ನಿಶ್ಚಯಿಸಿದ ಸಮುದಾಯದ ಸ್ವಾಮೀಜಿಗಳು ಹಾಗೂ ಮುಖಂಡರ ತೀರ್ಮಾನ ಸೂಕ್ತವಾಗಿದೆ ಎಂದರು.

ಹಿರಿಯೂರಿನ ಆದಿಜಾಂಬವ ಗುರುಪೀಠದ ಷಡಕ್ಷರಿ ದೇಶೀಕೇಂದ್ರ ಸ್ವಾಮೀಜಿಯವರು ಪಾದಯಾತ್ರೆಗೆ ಮುನ್ನ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಎರಡು ದಿನಗಳ ಕಾಲ ಸಂಚಾರ ಮಾಡಿ ಜಾಗೃತಿ ಮೂಡಿಸುವರು ಎಂದರು. 

ಪ್ರತಿ ಹಳ್ಳಿಯಿಂದಲೂ ಬನ್ನಿ:  ಪಾದಯಾತ್ರೆ ಇಲ್ಲಿಂದಲೇ ಆರಂಭವಾಗುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದ ಪ್ರತಿ ಮನೆಯಿಂದಲೂ ತಲಾ ಒಬ್ಬರು ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಬೇಕಿದೆ ಎಂದರು.

ಸಮುದಾಯದ ಮುಖಂಡರಾದ ನಿಟ್ಟೂರು ಕೃಷ್ಣಪ್ಪ, ಕುಂಬಳೂರು ಎ.ಕೆ. ಅಂಜಿನಪ್ಪ ಮಾತನಾಡಿ, ಸಮುದಾಯದ ಈಗಿನ ಹಾಗೂ ಮುಂದಿನ ಪೀಳಿಗೆಗೆ ಅನುಕೂಲಕ್ಕೆ ಒಳ ಮೀಸಲಾತಿ ಅಗತ್ಯವಾಗಿದೆ ಎಂದರು. ವಾಸನ  ಗ್ರಾ.ಪಂ. ಅಧ್ಯಕ್ಷ ಗದಿಗೇಶ್, ಉಕ್ಕಡಗಾತ್ರಿ ಗ್ರಾ.ಪಂ. ಅಧ್ಯಕ್ಷ ನಂದಿಗುಡಿ ಲೋಕೇಶ್,  ಹರಳಹಳ್ಳಿ ಗ್ರಾ.ಪಂ. ಸದಸ್ಯ ಎಚ್.ಎಂ. ಹನುಮಂತಪ್ಪ, ಗುಳದಹಳ್ಳಿ ಮಂಜಪ್ಪ, ಹೊಸಪಾಳ್ಯ ಗ್ರಾ.ಪಂ. ಸದಸ್ಯ ಪರಸಪ್ಪ, ಹಾಲಿವಾಣ ಚಂದ್ರಶೇಖರ್, ಮಂಜುನಾಥ್ ವಾಸನ, ನಂದಿ ಬಸಪ್ಪ ಬಿಳಸನೂರು, ನರಸಿಂಹಪ್ಪ ಮಲೇಬೆನ್ನೂರು, ಪ್ರಭು, ವರುಣ್, ದರ್ಶನ್, ಮಹಾಂತೇಶ್, ಹನುಮಂತಪ್ಪ ಹಿಂಡಸಘಟ್ಟ, ಕುಂಬಳೂರು ಬಸವರಾಜಪ್ಪ, ಹಳ್ಳಿಹಾಳ್ ಹನುಮಂತ, ಭಾನುವಳ್ಳಿ ಹರೀಶ್, ಹಾಲಿವಾಣ ಗದಿಗೆಪ್ಪ, ನಿಟ್ಟೂರು ರವಿ, ಎಚ್.ಪಿ. ಹನುಮಂತಪ್ಪ, ಕುಮಾರ್ ಇನ್ನಿತರರಿದ್ದರು.

error: Content is protected !!