ಕೊಟ್ಟೂರು, ಮಾ. 6 – ಇಂದು ನಡೆಯಲಿರುವ ಕೊಟ್ಟೂರೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ಪಾದಯಾತ್ರೆ ಮೂಲಕ ಪ್ರತಿವರ್ಷ ಬರುತ್ತಿದ್ದ ಭಕ್ತರ ಸಂಖ್ಯೆ ಕೋವಿಡ್ ಕಾರಣದಿಂದ ಕುಂಠಿತವಾಗಿದೆ. ಲಕ್ಷಾಂತರ ಭಕ್ತರಿಂದ ತುಂಬಿ ಹೋಗುತ್ತಿದ್ದ ರಸ್ತೆಗಳಲ್ಲಿ ಬೆರಳೆಣಿಕೆಯ ಭಕ್ತರನ್ನು ಕಾಣುವಂತಾಗಿದೆ.
ನೂರಾರು ಹರಕೆ ಹೊತ್ತು ಕೊಟ್ಟೂರೇಶ್ವರನ ಭಕ್ತರು ಪ್ರತಿವರ್ಷ ಪಾದಯಾತ್ರೆ ಕೈಗೊಳ್ಳುವುದು ನಡೆದೇ ಇತ್ತು. ಈ ಸಂಪ್ರದಾಯ ಈ ಬಾರಿಯೂ ಮುಂದುವರೆದಿದ್ದು, ದೂರದ ನವಲಗುಂದ, ನರಗುಂದ, ಹಾವೇರಿ ಗದಗ ದಾವಣಗೆರೆ ಮತ್ತಿತರ ಕಡೆಗಳಿಂದ ಭಕ್ತರು ಪಾದಯಾತ್ರೆಯ ಮೂಲಕ ಶನಿವಾರ ಪಟ್ಟಣಕ್ಕೆ ಆಗಮಿಸಿದರು.
ಪಾದಯಾತ್ರೆಗಳಿಗೆ ಸೇವೆ ಸಲ್ಲಿಸುತ್ತಿದ್ದ ಕೊಟ್ಟೂರಿನ ಜನತೆ ಈ ಬಾರಿ ಯಾವುದೇ ಪ್ರಸಾದ ಮತ್ತಿತರೆ ಸೇವಾ ವ್ಯವಸ್ಥೆಯನ್ನು ಆಯೋಜಿಸಲು ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಆಡಳಿತ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಪಾದಯಾತ್ರಿಗಳು ನೇರ ಶ್ರೀ ಸ್ವಾಮಿ ಮಠಗಳಿಗೆ ತೆರಳಿ ಸ್ವಾಮಿಯ ದರ್ಶನ ಪಡೆದು ವಿಶ್ರಾಂತಿ ಪಡೆದುಕೊಳ್ಳುವತ್ತ ಮುಂದಾದರು.
ಪತಿಯ ಕುಡಿತ ಬಿಡಿಸಲೆಂದು ಪಾದಯಾತ್ರೆ ಕೈಗೊಂಡ ಮಹಿಳೆ : ಪಾದಯಾತ್ರೆ ಮೂಲಕ ಕೊಟ್ಟೂರಿಗೆ ಬಂದಿರುವ ಹರಿಹರ ತಾಲ್ಲೂಕಿನ ಸರೋಜಮ್ಮ ಎಂಬ ಮಹಿಳೆ ತನ್ನ ಪತಿ ಕುಡಿತದ ದಾಸನಾಗಿದ್ದು, ಈತನನ್ನು ಕುಡಿತದಿಂದ ವಿಮೋಚನೆ ಗೊಳಿಸುವಂತೆ ಕೊಟ್ಟೂರೇಶ್ವರ ಸ್ವಾಮಿ ಮಾಡಲೆಂದು ಹರಕೆ ಹೊತ್ತು ಎರಡು ದಿನದ ಹಿಂದೆ ಪಾದಯಾತ್ರೆ ಕೈಗೊಂಡಿದ್ದಾಳೆ. ನಾಲ್ಕು ವರ್ಷಗಳಿಂದ ಪಾದಯಾತ್ರೆ ಕೈಗೊಳ್ಳುತ್ತಾ ಬಂದಿದ್ದು ಇದುವರೆಗೂ ಪತಿ ಕುಡಿತದಿಂದ ಮುಕ್ತನಾಗಿಲ್ಲ. ಇದಕ್ಕಾಗಿಯೇ ಈ ಬಾರಿನೂ ಪಾದಯಾತ್ರೆ ಕೈಗೊಂಡಿರುವೆ ಎಂದು ಸರೋಜಮ್ಮ ಹೇಳಿಕೊಂಡಿದ್ದಾಳೆ.