ಗ್ರಾ.ಪಂ. ಅಧ್ಯಕ್ಷರು ಗ್ರಾಮಾಭಿವೃದ್ಧಿಗೆ ಶ್ರಮಿಸಲಿ

ಜಗಳೂರು: ಅಭಿನಂದನಾ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ

ಜಗಳೂರು, ಮಾ.6- ಸಚಿವರು ಗಳಿಗೆ ಇಲ್ಲದ, ಚೆಕ್‌ನಲ್ಲಿ ಸಹಿ ಮಾಡುವ ಅಧಿಕಾರ  ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಇದೆ. ಹಣದ ಆಮಿಷ ತೊರೆದು ನಂಬಿದ ಜನತೆಯ ಋಣ ತೀರಿಸಿ ಉತ್ತಮ ಕೆಲಸ ಗಳನ್ನು ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಸಲಹೆ ನೀಡಿದರು.

  ಪಟ್ಟಣದ ತರಳಬಾಳು ಭವನದಲ್ಲಿ ಬಿಜೆಪಿ ಪಕ್ಷದಿಂದ ವಿಧಾನ ಸಭಾ
ಕ್ಷೇತ್ರದ ಬಿಜೆಪಿ ಬೆಂಬಲಿತ 29 ಗ್ರಾ.ಪಂ.ಗಳ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗಾಂಧೀಜಿ ಕಂಡಂತಹ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜ ಪೇಯಿ ಅವರ ಧೀಮಂತ ವ್ಯಕ್ತಿತ್ವದಿಂದ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತಿದೆ.  ಅದರ ಸದುಪಯೋಗ ಆಗಬೇಕು ಎಂದರು.

ಜಿಲ್ಲೆಯಲ್ಲಿ 370 ಜಲಜೀವನ್ ಮಿಷನ್‌ ಯೋಜನೆಯಡಿ ಕುಡಿಯುವ ನೀರು ಪೂರೈಕೆಯಾಗಲಿದೆ. ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ, 57 ಕೆರೆ ಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿದ್ದು, ವಿವಿಧ ಯೋಜನೆ ಗಳಡಿ 3 ಸಾವಿರ ಕೋಟಿ ರೂ. ಅನುದಾನ ಹರಿದು ಬರಲಿದೆ. ಇದರಿಂದ ಬರದ ತಾಲ್ಲೂಕು  ಸಮೃದ್ಧಿಯಾಗಲಿದೆ ಎಂದು  ಭರವಸೆ ನೀಡಿದರು.

ದೇಶದಲ್ಲಿ ಎರಡನೇ ಬಾರಿ ಪ್ರಧಾನಿಯಾಗಿರುವ ಮೋದೀಜಿ ಚುನಾವಣೆ ಪ್ರಣಾಳಿಕೆಯಲ್ಲಿ ಹಾಗೂ ಭಾಷಣದಲ್ಲಿ ತಿಳಿಸಿದಂತೆ ಜನ್‌ಧನ್, ಆಯುಷ್ಮಾನ್, ಸುರಕ್ಷಾ ಬಿಮಾ ಯೋಜನೆ, ಫಸಲ್ ಬಿಮಾ ಯೋಜನೆ, ರೈತರ ಆದಾಯ ದ್ವಿಗುಣಗೊಳ್ಳಲು ಕನಿಷ್ಠ ಬೆಂಬಲ ಬೆಲೆ ಸೇರಿದಂತೆ, ಹಲವು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ ಎಂದರು.

ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಸಂಖ್ಯೆ ಎಷ್ಟು  ಎಂಬುದನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಿಲ್ಲ. ಆದರೆ ವಿರೋಧ ಪಕ್ಷದವರಿಗೆ ಕಾರ್ಯಕ್ರಮದ ಮೂಲಕ ನಮ್ಮ ಪಕ್ಷದ ಬೆಂಬಲಿತರು ಎಷ್ಟಿದ್ದಾರೆ ಎಂಬುದನ್ನು ತೋರಿಸಿರುವೆ ಎಂದರು.

ಗ್ರಾ.ಪಂ. ಸದಸ್ಯರ  ಗೆಲುವಿಗೆ ಶ್ರಮಿಸಿದ ಬಿಜೆಪಿ ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸಿ ಗ್ರಾ.ಪಂ. ನರೇಗಾ ಯೋಜನೆ, 15ನೇ ಹಣಕಾಸು ಯೋಜನೆ ಅನುದಾನಗಳನ್ನು ಸಮರ್ಪಕವಾಗಿ ಬಳಸಿ ರಸ್ತೆ, ಚರಂಡಿ ಸ್ವಚ್ಚತೆ, ಕುಡಿಯುವ ನೀರು ಸೇರಿದಂತೆ ಗ್ರಾಮಾಭಿವೃದ್ಧಿಗೆ ಮುಂದಾಗಬೇಕು. ಸಮಸ್ಯೆಗಳು ಉಂಟಾದಲ್ಲಿ ಖುದ್ದಾಗಿ ನಾನೇ ಆಗಮಿಸಿ ಪರಿಹರಿಸುವೆ  ಎಂದರು.

ಮುಂಬರುವ ಚುನಾವಣೆಯಲ್ಲಿ ತಾಲ್ಲೂಕಿನ 5 ಜಿಲ್ಲಾ ಪಂಚಾಯ್ತಿ  ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ, ತಾಲ್ಲೂಕು ಪಂಚಾಯಿತಿ ಅಧಿಕಾರ ಬಿಜೆಪಿ ವಶವಾಗಲಿದೆ. ಗ್ರಾ.ಪಂ. ಸದಸ್ಯರು ಗ್ರಾಮಗಳಲ್ಲಿ ಜನರ ನಿರೀಕ್ಷೆಯಂತೆ ಕೆಲಸ ನಿರ್ವಹಿಸಬೇಕು ಎಂದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 25 ಕೋಟಿ ರೂ. ಅನುದಾನದಡಿ ತಾಲ್ಲೂಕಿನಲ್ಲಿ ರಸ್ತೆಯೇ ಕಾಣದ ಹಳ್ಳಿಗಳಲ್ಲಿ ರಸ್ತೆ ಸಂಪರ್ಕ ನಿರ್ಮಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ  ಪ್ರಧಾನಿ ಮೋದೀಜಿ ಅವರ ಕನಸಿನಂತೆ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಕಂಗೊಳಿಸುತ್ತಿದೆ. ಇದು ಬಿಜೆಪಿ ಪಕ್ಷದ ಕೊಡುಗೆ  ಎಂದು   ಹೇಳಿದರು. `ಒಂದು ದೇಶ, ಒಂದು ಚುನಾವಣೆ’ಗೆ ಏಕೆ ವಿರೋಧ? ಇದರಿಂದ ಹಣ, ಶ್ರಮ, ಸಮಯ, ಉಳಿತಾಯವಾಗಲಿದೆ. ಪ್ರತಿಯೊಬ್ಬರೂ ಕೈಜೋಡಿಸಿ ಗ್ರಾಮದಿಂದ ದೆಹಲಿಯವರೆಗೆ ಬಿಜೆಪಿ ಪಕ್ಷ ಬೆಳೆಸೋಣ ಎಂದು ಕರೆ ನೀಡಿದರು.

ಕೊವಿಡ್-19 ಚುಚ್ಚುಮದ್ದು ಕಂಡುಹಿಡಿದು ಸಮರ್ಥವಾಗಿ ಕೊರೊನ ಆಕ್ರಮಣ ತಡೆಗಟ್ಟಿದ ದೇಶ ನಮ್ಮದಾಗಿದೆ. ಕಳೆದ ದಶಕಗಳ ಹಿಂದೆ ಕೇವಲ ಲಕ್ಷ ಲಕ್ಷ ಅನುದಾನವಿತ್ತು. ಇದೀಗ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ  ಪ್ರತಿವರ್ಷ ಒಂದು ಕೋಟಿ ಅನುದಾನ ಹರಿದು ಬರುತ್ತಿದೆ. ಇದು  ಬಿಜೆಪಿ ಪಕ್ಷದ ಕನಸಿನ ಗ್ರಾಮ ವಿಕಾಸ ಯೋಜನೆಯಾಗಿದೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ, ಮಾಜಿ ಉಪಾಧ್ಯಕ್ಷ ಸಿದ್ದಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ್ ರೆಡ್ಡಿ, ಜಿ.ಪಂ. ಸದಸ್ಯೆ  ಸವಿತಾ, ಬಿಜೆಪಿ  ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ಪ.ಪಂ‌‌. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತಾ, ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಉಪಾಧ್ಯಕ್ಷ ಗುರುಮೂರ್ತಿ, ತಾ.ಪಂ. ಸದಸ್ಯರಾದ ಸಿದ್ದೇಶ್, ಮರೇನಹಳ್ಳಿ ಬಸವರಾಜ್, ತಿಮ್ಮೇಶ್ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಲಕ್ಷ್ಮಿ, ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್, ಎಸ್.ಟಿ. ಮೋರ್ಚಾ ಜಯರಾಮ್, ಸೆನೆಟ್ ಸದಸ್ಯ ಕೃಷ್ಣಮೂರ್ತಿ, ಮಾಜಿ ಜಿ.ಪಂ. ಸದಸ್ಯ ನಾಗರಾಜ್, ಮುಖಂಡರಾದ ಜೆ.ವಿ. ನಾಗರಾಜ್, ಸುಧಾಮಣಿ, ಬಿಸ್ತುವಳ್ಳಿ ಬಾಬು, ನಿಜಲಿಂಗಪ್ಪ ಇನ್ನಿತರರಿದ್ದರು.

error: Content is protected !!