ವಿಜಾನದ ಸತ್ಯಾನ್ವೇಷಣೆ ಮರೆ

ವಿಜ್ಞಾನ ದಿನಾಚರಣೆಯಲ್ಲಿ ಡಾ. ಎಸ್. ಶಿಶುಪಾಲ ವಿಷಾದ

ದಾವಣಗೆರೆ, ಮಾ.6- ಜೀವನದಲ್ಲಿ ವಿಜ್ಞಾನ ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದೇವೇಯೇ ವಿನಃ ವಿಜ್ಞಾನದ ಮಹತ್ವದ ನಿಜವಾದ ಸತ್ಯಾನ್ವೇಷಣೆ ಆಗುತ್ತಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಮೈಕ್ರೋಬಯಾಲಜಿ ವಿಭಾಗ ಪ್ರೊಪೆಸರ್, ಪಕ್ಷಿ ತಜ್ಞ ಡಾ. ಎಸ್. ಶಿಶುಪಾಲ ವಿಷಾದಿಸಿದರು.

ಅವರು, ಇಂದು ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವಿಜ್ಞಾನ ಸತ್ಯಾನ್ವೇಷಣೆ ಮಾರ್ಗ, ತಂತ್ರಜ್ಞಾನ ಜೀವನವನ್ನು ಸುಖಮಯ ಮಾಡುವ ಆವಿಷ್ಕಾರ ಆಗಿದೆ. ಇವೆರಡರ ನಡುವೆ ಬಹಳಷ್ಟು ವ್ಯತ್ಯಾಸಗಳಿದ್ದು, ತಂತ್ರಜ್ಞಾನ ಬಳಕೆಗೆ ಹೆಚ್ಚು ಮುಂದಾಗಿದ್ದೇವೆ. ವಿಜ್ಞಾನ ಅರಿಯುವಲ್ಲಿ ಮನಸ್ಸು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವೈಜಾನಿಕ ವಿಶ್ಲೇಷಣೆ ಪ್ರಸ್ತುತ ಬಹಳ ಅಗತ್ಯ ಇದೆ. ವಿಜ್ಞಾನದ ವಿಚಾರದಲ್ಲಿ ಪ್ರತಿಯೊಬ್ಬರು ತಿಳಿವಳಿಕೆ ಮಾಡಿಕೊಳ್ಳುವುದು ಕರ್ತವ್ಯ. ಅದು ಜೀವನ ಶೈಲಿ ಆಗಬೇಕು. ಇದರಿಂದ ಪ್ರಕೃತಿಯಲ್ಲಿನ ಮಹತ್ವ ಅರಿಯಬಹುದು. ಪ್ರಕೃತಿದತ್ತವಾದದ್ದು ವೈಜಾನಿಕವಾಗಿದೆ. ಪರಿಸರದ ಯಾವುದೇ ಅಂಶವು ಅನುಪಯುಕ್ತವಲ್ಲ  ಎಂದು ತಿಳಿಸಿದರು.

ವಿಜ್ಞಾನದ ಪ್ರಥಮ ಹಂತ ಪ್ರಶ್ನಿಸುವುದು, ಕುತೂಹಲದಿಂದ ತಿಳುವಳಿಕೆ ಮಾಡಿಕೊಳ್ಳುವುದರ ಜೊತೆಗೆ ಗಮನಿಸುವುದಾಗಿದೆ. ವಿಜ್ಞಾನಿಗೆ ಕುತೂಹಲ ತಣಿಸುವಂತಹ ಬುದ್ಧಿ ಇರಬೇಕು. ಸಂಶೋಧನೆಯಿಂದ ಹೇಳುವಂತಿರಬೇಕು. ವಿಜ್ಞಾನದ ವಿದ್ಯಾರ್ಥಿಗೆ ಪ್ರಶ್ನೆ ಮಾಡುವ, ಗಮನಿಸುವ ಮತ್ತು ಸಂಶೋಧನೆ ಮಾಡುವ ಮನೋಭಾವ ಬರಬೇಕಿದೆ. ಸಮಯ ಪ್ರಜ್ಞೆ, ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ವಿಜಾನಿ ಆಲ್ಬರ್ಟ್ ಸಬಿನ್ ಸಂಶೋಧನೆ ಮುಖೇನ ಪೋಲಿಯೋ ಲಸಿಕೆ ಕಂಡು ಹಿಡಿದ ಕಾರಣ ಪೋಲಿಯೋ ಪೀಡಿತರ ಸಂಖ್ಯೆ ಕ್ಷೀಣಿಸುತ್ತಿದ್ದು, 1980ರಲ್ಲೇ ಅಮೇರಿಕಾ ಪೋಲಿಯೋ ಮುಕ್ತವಾಗಿದೆ. ಆಲ್ಬರ್ಟ್ ಸಬಿನ್ ಅವರ ಈ ಸಾಧನೆಯೇ ವಿಜಾನಕ್ಕೆ ನೀಡಿದ ಕೊಡುಗೆ. ಇಂತಹ ಸಮಾಜಮುಖಿ, ದೇಶದ ಏಳಿಗೆಯ ಸಂಶೋಧನೆಗೆ ಮುಂದಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಮ್ಮ ಮನೆಯ ಅಂಗಳದಲ್ಲಿ 730 ಗಿಡಗಳನ್ನು ಪೋಷಿಸಲಾಗುತ್ತಿದ್ದು, ಇವುಗಳಿಂದ ಗಾರ್ಡನಿಂಗ್, ಶುದ್ಧ ಗಾಳಿ, ಮನೆ ಸುತ್ತಮುತ್ತ ವಾತಾವರಣ ತಂಪಾಗಿರಲಿದೆ. ಅಷ್ಟೇ ಅಲ್ಲದೇ ಮುಖ್ಯವಾಗಿ ಸ್ಥಳೀಯರಿಗೆ ಪ್ರಾಕೃತಿಕವಾದ ಆಮ್ಲಜನಕ ಸಿಗುತ್ತಿದೆ. ನೀವು ಸಹ ನಿಮ್ಮ ಕಾಲೇಜು, ಮನೆಗಳ ಬಳಿ ಗಿಡಗಳ ನೆಟ್ಟು ಪೋಷಿಸಿದರೆ ಅವುಗಳಿಂದಾಗುವ ಉಪಯುಕ್ತಗಳೇ ಸಮಾಜಕ್ಕೆ ಕೊಡುಗೆಯಾಗಬಲ್ಲದು. ಈ ಹಿನ್ನೆಲೆಯಲ್ಲಿ ಪರಿಸರ ರಕ್ಷಣೆಗೆ ಯುವಜನತೆ ಮುಂದಾಗಿ, ಮುಂದಿನ ಪೀಳಿಗೆ ಪರಿಸರ ಉಳಿಸಬೇಕು ಎಂದು ಆಶಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಪ್ರೊ. ಮುರುಗೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನದ ವಿದ್ಯಾರ್ಥಿಗಳು ಕೇವಲ ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರದ ಕಡೆಗೆ ಹೆಚ್ಚಿನದಾಗಿ ಒಲವು ಹೊಂದಿದ್ದಾರೆ. ಮೂಲ ವಿಜ್ಞಾನಕ್ಕೆ ಒಲವು ತೋರುತ್ತಿಲ್ಲ ಎಂದ ಅವರು, ವಿದ್ಯಾರ್ಥಿಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ವಿಚಾರಗಳಿಗೆ ಧ್ವನಿ ಎತ್ತಬೇಕೆಂದರು.

ಇದೇ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ ಪದವಿಯಲ್ಲಿ 10ನೇ ರಾಂಕ್ ಪಡೆದ ಎಸ್.ಎಂ. ಉಷಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎವಿಕೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಪಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಶಿವಕುಮಾರ್, ಜಿ.ಎಸ್. ಲೋಕೇಶ್ವರಪ್ಪ, ರಾಮಚಂದ್ರ, ಪ್ರಭಾವತಿ, ಅನುರಾಧ, ಆರ್.ಸಿ. ಗೌಡ, ಪಾಲಾಕ್ಷಪ್ಪ, ಕಾರ್ಯದರ್ಶಿ ಸುಷ್ಮಾ ಇದ್ದರು. ಸಹನಾ ಪ್ರಾರ್ಥಿಸಿದರು. ಶಫೀಯಾ ಆಜಂ ಸ್ವಾಗತಿಸಿದರು. ಐ.ಕೆ. ಸಂಗೀತಾ ಮತ್ತು ಶಿವಾನಿ ನಿರೂಪಿಸಿದರು. ಸುಮನ್ ವಂದಿಸಿದರು.

error: Content is protected !!