ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ ಸ್ಪೋಟಕ ವಸ್ತುಗಳ ಜಪ್ತು

ದಾವಣಗೆರೆ, ಮಾ.5- ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ  ನಡೆಸಿರುವ ಮಾಯಕೊಂಡ ಪೊಲೀಸರು ಓರ್ವನ ಬಂಧಿಸಿ, ಸ್ಫೋಟಕ ವಸ್ತುಗಳು ಸೇರಿದಂತೆ 1 ಲಕ್ಷದ 15 ಸಾವಿರದ 934 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ತಾಲ್ಲೂಕು ಒಂಟಿಹಾಳು ಗ್ರಾಮದ ಹತ್ತಿರವಿರುವ ಗುಜ್ಜಿಕೊಂಡ ಗ್ರಾಮದಲ್ಲಿ ಕಲ್ಲು ಕ್ವಾರಿ ಸ್ಥಳಕ್ಕೆ ಗುರುವಾರ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಆರ್.ಜಿ. ಅಶ್ವಿನ್ ಕುಮಾರ್ ಮತ್ತು ಸಿಬ್ಬಂದಿಗಳಾದ ಜಿ.ಎಲ್. ಮಂಜುನಾಥ, ಅರುಣಕುಮಾರ ಕುರುಬರ, ಹನುಮಂತಪ್ಪ ಹಾಗೂ ಬ್ಲಾಸ್ಟಿಂಗ್ ತಜ್ಞರೊಂದಿಗೆ ದಾಳಿ ನಡೆಸಿ, ಸ್ಥಳದಲ್ಲಿದ್ದ ತಾಲ್ಲೂಕಿನ ಕುರ್ಕಿ ಕ್ಯಾಂಪ್ ನ ಕಾರ್ತಿಕ್  ಈತನನ್ನು ಬಂಧಿಸಿದ್ದಾರೆ.

14 ಸಾದಾ ಕೇಪು, ಐಡಿಯಲ್ ಪವರ್ -90 ಜಲ್, 10 ಟೂಬ್ ಗಳು, ಕಲೆಕ್ಷನ್ ವೈರ್ ಸುಮಾರು 150 ಗ್ರಾಂ, ಸುಮಾರು 1 ಕೆಜಿ ಮದ್ದು, ಡಿಗಾರ್ಡ್ ಕೇಬಲ್ 1 ಮೀಟರ್, 60 ಅಡಿ ಹಸಿರು ಬಣ್ಣದ ಸಾದಾ ಬತ್ತಿ, 4 ಕೆಜಿ ಬ್ಲಾಸ್ಟಿಂಗ್ ಉಪ್ಪು, 2 ಮೆಗ್ಗರ್ ಮೆಷಿನ್, 1 ಕೇಪ್ ಚೆಕ್ ಮಾಡುವ ಚೆಕ್ ಮೀಟರ್, 1 ಎಲೆಕ್ಟ್ರಿಕ್ ಡಿಟೋನೇಟರ್, 1 ಕೆಜಿ ಎಕ್ಸ್ ಪ್ಲೋಸಿವ್ ಬೂಸ್ಟರ್ ಮೆಟೀರಿಯಲ್ ಸ್ಫೋಟಕ ವಸ್ತುಗಳು ಹಾಗೂ 16 ಕಲ್ಲು ಹೊಡೆಯುವ ಸುತ್ತಿಗೆಗಳು, 25 ಕಲ್ಲು ಹೊಡೆಯುವ ಉಳಿ, ಕಂಪ್ರೆಸರ್ ರಾಡು, 2 ಕಬ್ಬಿಣದ ಜಾಕ್ ಹ್ಯಾಮರ್, ಏರ್ ಕಂಪ್ರೆಷರ್ ಗೆ ಬಳಸುವ ಒಂದು ಹಳೆಯ ಪೋರ್ಡ್ ಕಂಪನಿಯ ಟ್ರ್ಯಾಕ್ಟರ್, ರಾಮಾಂಜನೇಯ ಸ್ಟೋನ್ ಇಂಡಸ್ಟ್ರೀಸ್ ಕಬ್ಬೂರು ಗ್ರಾಮ ಇವರ ಹೆಸರಿಗೆ ಇರುವ ಒಂದು ಬಿಲ್ ಪುಸ್ತಕ ಪತ್ತೆಯಾಗಿವೆ.

ಕಲ್ಲು ಕ್ವಾರಿಯ ಜಮೀನಿನ ಮಾಲೀಕ ಬಾಡ ಗ್ರಾಮದ ದಿನೇಶ್ ಮತ್ತು ಅಕ್ರಮವಾಗಿ ಕಲ್ಲು ಕ್ವಾರಿ ನಡೆಸುತ್ತಿದ್ದ  ಕಬ್ಬೂರು ಗ್ರಾಮದ ತಂಗವೇಲು ವಿರುದ್ಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

error: Content is protected !!