ದುಡಿಯುವ ಜನರ ಬದುಕು, ದುಡಿಮೆಯ ಹಕ್ಕು ರಕ್ಷಿಸಿ

ಎಐಯುಟಿಯುಸಿಯಿಂದ ಮೇ ದಿನಾಚರಣೆ

ದಾವಣಗೆರೆ, ಮೇ 1- ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಜಿಲ್ಲಾ ಸಮಿತಿ ವತಿಯಿಂದ ಆನ್ ಲೈನ್ ಮೂಲಕ ಇಂದು ಅಂತರರಾಷ್ಟ್ರೀಯ ಮೇ ದಿನ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ. ಶಶಿಧರ್ ಮಾತನಾಡಿ, ಕಳೆದ ವರ್ಷದ ಕರಾಳ ಲಾಕ್ ಡೌನ್ ನೆನಪುಗಳು ಇನ್ನೇನು ಮಾಸಿ ಮರೆಯಾಗುತ್ತಿವೆ ಎಂದುಕೊಳ್ಳುತ್ತಿರುವಾಗ ಸದ್ದಿಲ್ಲದೆ ಮತ್ತೊಮ್ಮೆ ಲಾಕ್ ಡೌನ್ ಭೀತಿ ದುಡಿಯುವ ಜನಕ್ಕೆ ಆವರಿಸುತ್ತಿದೆ. ಮತ್ತೆ ಮುಂಬೈನಂತಹ ನಗರಗಳಿಂದ ಹುಟ್ಟಿದೂರುಗಳಿಗೆ ವಲಸೆ ಕಾರ್ಮಿಕರು ಮರಳುವುದು, ಶಾಲಾ – ಕಾಲೇಜು-ಹಾಸ್ಟೆಲ್‍ಗಳನ್ನು ಬಂದ್ ಮಾಡಿರುವುದು, ದುಡಿಯುವವರು ಕೆಲಸದಿಂದ ವಜಾ ಆಗುತ್ತಿರುವ, ವೇತನ ಕಡಿತ ಮತ್ತಿತರೆ ಸಂಕಷ್ಟಗಳು ಎದುರಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಥಾ ರೀತಿ ಬಂಡವಾಳಶಾಹಿ ಮಾಲೀಕರ ಕಾರ್ಪೊರೇಟ್ ಮನೆತನಗಳ ಹಿತವನ್ನು ಕಾಪಾಡಲು ಲಜ್ಜೆಯಿಲ್ಲದೆ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು, ಕರಾಳ ಕಾಯ್ದೆಗಳನ್ನು ಅನುಸರಿಸುತ್ತಿವೆ. ಹೀಗೆ ದುಡಿಯುವವರ ಉದ್ಯೋಗ ಹಾಗೂ ಉದ್ಯೋಗದ ಹಕ್ಕುಗಳನ್ನು ಕಿತ್ತುಕೊಳ್ಳು ತ್ತಿರುವ ಅತ್ಯಂತ ಕೆಟ್ಟ ಸಂದರ್ಭದಲ್ಲಿ ಈ ಎಲ್ಲಾ ಅನಿಷ್ಟಗಳ ವಿರುದ್ಧ ಹೋರಾಡಲು ಸ್ಫೂರ್ತಿಯನ್ನು ನೀಡುವ ಐತಿಹಾಸಿಕ ಮೇ ದಿನ ಮತ್ತೆ ಬಂದಿದೆ. ದುಡಿಯುವ ವರ್ಗಕ್ಕೆ ಶಾಸನದತ್ತ ಸೌಲಭ್ಯಗಳನ್ನು ಹಾಗೂ ಹಕ್ಕುಗಳನ್ನು ತಂದುಕೊಡುವಲ್ಲಿ ಸ್ಪೂರ್ತಿಯಾದ ಮೇ ದಿನದ ಮಹತ್ವವನ್ನೇ ಆಳ್ವಿಕರು ಹೇಳ ಹೆಸರಿಲ್ಲದಂತೆ ಮಾಡಲು ಹೊರಟಿದ್ದಾರೆ. ದುಡಿಯುವ ಜನರನ್ನು ಮೇ ದಿನದ ಹೋರಾಟದ ಮುಂಚಿನ ದಿನಗಳಿಗೆ ಕೊಂಡೊಯ್ಯುವ ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.

ಕೃಷಿ ಉತ್ಪನ್ನಗಳಿಗೆ ಯಾವುದೇ ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿ ನೀಡದ ಅಗತ್ಯ ವಸ್ತುಗಳ ಕಾಯ್ದೆಯನ್ನೂ ಸಹ ಮಂಡಿಸಲಾಗಿದೆ. ಇದರಿಂದ ಈಗಾಗಲೇ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಹೆಚ್ಚಾಗಲಿವೆ. ಕೃಷಿ ಕ್ಷೇತ್ರವನ್ನು ಅವಲಂಬಿಸಿದ ಕುಟುಂಬಗಳಿಗೆ ಮತ್ತು ಇತರೆ ದುಡಿಯುವ ಸಮುದಾಯಗಳಿಗೆ ಇದೊಂದು ದೊಡ್ಡ ಹೊಡೆತವಾಗಿದೆ. ಆಹಾರ ಭದ್ರತೆಯನ್ನು ಕಸಿಯುತ್ತದೆ. ಫ್ಯಾಸ್ಟ್ ವಾದಿ ಉದ್ದೇಶದಿಂದ ಕೂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020, ಕಡಿಮೆ ವರಮಾನದ, ದುಡಿಯುವ ಕುಟುಂಬಗಳಿಗೆ ಸೇರಿದ ಬಡ ಮತ್ತು ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳ ಜೀವನವನ್ನು ಅಧೋಗತಿಗೆ ತರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಲ್ಲಾ ದುಡಿಯುವ ಜನರು ನಡೆಸುವ ಬಿಡಿ ಬಿಡಿಯಾದ ಹೋರಾಟಗಳನ್ನು ಒಂದು ಸುದೀರ್ಘ ಸುಸಂಬದ್ಧ ಐಕ್ಯ ಹೋರಾಟವನ್ನಾಗಿ ಬೆಳೆಸುವುದು ಅವಶ್ಯಕತೆಯಾಗಿದೆ. ಶೋಷಣೆಯ ಮೂಲ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೆಸೆದು ದುಡಿಯುವ ಜನರ ಅಧಿಕಾರವನ್ನು ಸ್ಥಾಪಿಸಲು ಸಮಾಜವಾದದತ್ತ ಸಾಗಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕು ವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಪ್ಪೇಸ್ವಾಮಿ ಅಣಬೇರು ಸ್ವಾಗತಿಸಿದರು. ಎಲ್. ಹೆಚ್. ಪ್ರಕಾಶ್ ವಂದಿಸಿದರು.

ಆಶಾ ಕಾರ್ಯಕರ್ತೆಯರು, ಹಾಸ್ಟೆಲ್ ಕಾರ್ಮಿಕರು, ವಿಶ್ವವಿದ್ಯಾಲಯ ನೌಕರರು, ಯುಬಿಡಿಟಿ ಸಿ ಮತ್ತು ಡಿ ಗ್ರೂಪ್ ನೌಕರರು, ವಿಂಡ್ ಮಿಲ್ ಮತ್ತು ಸೋಲಾರ್ ಕಾರ್ಮಿಕರು ಸೇರಿದಂತೆ ನೂರಾರು ಜನ ಫೇಸ್ ಬುಕ್ ಮತ್ತು ಗೂಗಲ್ ಮೀಟ್‍ನಲ್ಲಿ ಭಾಗವಹಿಸಿದ್ದರು.

error: Content is protected !!