ಕೂಡ್ಲಿಗಿಯಲ್ಲಿ ಸಂಪನ್ಮೂಲ ವ್ಯಕ್ತಿ ಡಿ.ಎಚ್.ರವೀಂದ್ರ
ಕೂಡ್ಲಿಗಿ, ಮಾ.4 – ಗುಣಮಟ್ಟದ ಶಿಕ್ಷಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದ್ದು, ಹೀಗಾಗಿಯೇ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಗಳು ಅಸ್ತಿತ್ವಕ್ಕೆ ಬಂದಿವೆ ಎಂದು ಶಿಕ್ಷಣ ಇಲಾಖೆಯ ಬ್ಲಾಕ್ ಸಂಪನ್ಮೂಲ ವ್ಯಕ್ತಿ ಡಿ.ಎಚ್. ರವೀಂದ್ರ ತಿಳಿಸಿದರು.
ತಾಲ್ಲೂಕಿನ ಬಡೇಲಡಕು ಗ್ರಾಮದಲ್ಲಿ ಒಂದು ದಿನದ ಎಸ್ಡಿಎಂಸಿ ಸದಸ್ಯರ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.
ಶಾಲೆಯ ಸರ್ವತೋಮುಖ ಅಭಿವೃದ್ಧಿ ಯಲ್ಲಿ ಶಾಲಾಭಿವೃದ್ಧಿ ಸಮಿತಿ ಆಮೂಲಾಗ್ರ ಪಾತ್ರ ನಿರ್ವಹಿಸಬೇಕಾಗಿದ್ದು, ಗುಣಮಟ್ಟದ ಶಿಕ್ಷಣ, ಶಾಲೆಯಲ್ಲಿ ಮೂಲಭೂತ ಸೌಕರ್ಯ ಗಳು, ಮಕ್ಕಳ ಹಾಜರಾತಿ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಎಸ್ಡಿಎಂಸಿ ಮುಖ್ಯ ಎಂದರು.
ಗಜಾಪುರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಂದೀಪ್ ಮಾತನಾಡಿ, ಶಾಲೆಯಲ್ಲಿ ಗುಣ ಮಟ್ಟದ ಶಿಕ್ಷಣ ದೊರೆಯಲು ಕ್ರಮಕೈಗೊಳ್ಳ ಬೇಕು. ಈ ಮೂಲಕ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ ಕಾರಣವಾಗ ಬೇಕಿದೆ ಎಂದರು. ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ ಗುರುಬಸವರಾಜ್ ಸ್ಥಳೀಯ ಎಸ್ಡಿಎಂಸಿ ಸದಸ್ಯರಿಗೆ ಅವರ ಜವಾಬ್ದಾರಿಗಳು, ಕರ್ತವ್ಯದ ಬಗ್ಗೆ ತರಬೇತಿ ನೀಡಿದರು.
ಬಡೇಲಡಕು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರು ರಾಮಕೃಷ್ಣ ಮುಸಲೆ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣ ಇಲಾಖೆಯ ಬಿಆರ್ಪಿ ತಳವಾರ ಶರಣಪ್ಪ, ಮಂಜುನಾಥ, ಶಿಕ್ಷಕರಾದ ಸುಧಾಕರ್, ಶಿವನಾಯಕ ದೊರೆ, ಮಲ್ಲಿಕಾರ್ಜುನ, ಪಾರ್ವತಮ್ಮ ಹಾಗೂ ಸ್ಥಳೀಯ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಜರಿದ್ದರು.