ಪಂಚಮಸಾಲಿ ಸಮಾಜಕ್ಕೆ 2 ‘ಎ’ ಮೀಸಲಾತಿಗಾಗಿ ಹಕ್ಕೊತ್ತಾಯ ಚಳುವಳಿ

ದಾವಣಗೆರೆ, ಮಾ. 4 – ವೀರಶೈವ ಲಿಂಗಾಯತ ಪಂಚಮಸಾಲಿಗಳಿಗೆ 2 ‘ಎ’ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಸಮಿತಿ ಜಿ‌ಲ್ಲಾ ಘಟಕದಿಂದ ಹಕ್ಕೊತ್ತಾಯ ಚಳುವಳಿ ನಿನ್ನೆ  ನಗರದಲ್ಲಿ ನಡೆಯಿತು.

ಮೀಸಲಾತಿಗಾಗಿ ಆಗ್ರಹಿಸಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪೀಠದ ಶ್ರೀ ವಚನಾನಂದ ಶ್ರೀಗಳ‌ ನೇತೃತ್ವದಲ್ಲಿ ಪಾದಯಾತ್ರೆ ಹಾಗೂ ಬೆಂಗಳೂರಿನಲ್ಲಿ ಸಮಾವೇಶ ನಡೆದಿತ್ತು. ಇದರ ಮುಂದುವರೆದ ಭಾಗವಾಗಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬುಧವಾರ ಚಳುವಳಿ ನಡೆಸಲಾಯಿತು.

ನಂತರ ತಹಶೀಲ್ದಾರ್ ಕೆ.ಎನ್‌. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಬೈಕ್ ರಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಡಿಸಿ ಪೂಜಾರ್ ವೀರಮಲ್ಲಪ್ಪ ಅವರಿಗೆ ಮನವಿ ಅರ್ಪಿಸಿದರು.

ಸಮಾಜದ ಮುಖಂಡರೂ ಆಗಿರುವ ನಗರ ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್ ಮಾತನಾಡಿ, 2ಎ ಮೀಸಲಾತಿಗಾಗಿ 27 ವರ್ಷಗಳಿಂದ ಸಮಾಜ ಹೋರಾಟ ನಡೆಸುತ್ತಾ ಬಂದಿದೆ. ಸಮಾಜದಲ್ಲಿ ಶೇ 98ರಷ್ಟು ಕೃಷಿಕರು ಇದ್ದು, 2ಎ ಮೀಸಲಾತಿ ನೀಡಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಾಜದ ಜೊತೆ ಇರುವ ಭರವಸೆ ನೀಡಿದ್ದು, ನ್ಯಾಯ ಒದಗಿಸುವ ವಿಶ್ವಾಸವಿದೆ. ಸರ್ಕಾರದಲ್ಲಿ ಅನೇಕ ಒತ್ತಡಗಳು ಇರುತ್ತವೆ. ಆದರೆ ಸಮಾಜವನ್ನು ನೋಡಬೇಕಾಗುತ್ತದೆ. ಸಮಾಜ ಯಡಿಯೂರಪ್ಪ ಅವರ ಜೊತೆಗೆ ಇರುತ್ತದೆ. ಮುಂದಿನ ಅಧಿವೇಶನ ದೊಳಗೆ ತೀರ್ಮಾನ ತೆಗೆದುಕೊಂಡರೆ ಸಮಾಜ ಸ್ವಾಗತಿಸುತ್ತದೆ ಎಂದರು.

ನಿಜಲಿಂಗಪ್ಪ ಕಾಶಿಪುರ ಮಾತನಾಡಿ, ‘ಜನವರಿ 14ರಿಂದ ಉಭಯ ಸ್ವಾಮೀಜಿಗಳು ಪಾದಯಾತ್ರೆ, ಸಮಾವೇಶ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ಸ್ವಾಮೀಜಿಗಳು ಬೆಂಗಳೂರಿನಲ್ಲಿ ಸತ್ಯಾಗ್ರಹ ಕೈಗೊಂಡಿದ್ದಾರೆ.  ಒಂದು ವೇಳೆ ಘೋಷಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಮಿತಿ ಅಧ್ಯಕ್ಷ ಆರ್.ವಿ. ಅಶೋಕ್ ಗೋಪನಾಳ್, ಸಮಾಜದ ಮುಖಂಡರಾದ ಕೆ.ಬಿ. ನಾಗರಾಜ್, ಎಸ್‌.ಜಿ. ರುದ್ರೇಶ್, ಜಯಪ್ರಕಾಶ್, ಚನ್ನಬಸಪ್ಪ ಚಿಕ್ಕಮೇಗಳಗೆರೆ, ಆರ್.ರವಿ, ಎಸ್‌.ಕೆ. ಮಲ್ಲಿಕಾರ್ಜುನ, ಸ್ವಾಗಿ ಮುರುಗೇಶ್, ವೀರೇಶ್ ಇದ್ದರು.

error: Content is protected !!