ದಾವಣಗೆರೆ, ಜು.22 – ಬೆಸ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಿ, ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ದಾವಣಗೆರೆ ವಿಶ್ವವಿದ್ಯಾಲಯದ ಉಪಕಲಪತಿ ಪ್ರೊ. ಶರಣಪ್ಪ ಹಲಸೆ ಅವರ ಬಳಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಜಿಲ್ಲಾ ಸಮಿತಿಯು ಹಾಗೂ ವಿದ್ಯಾರ್ಥಿಗಳ ಹೋರಾಟ ಸಮಿತಿಯ ಸಾಮೂಹಿಕ ನಿಯೋಗ ಇಂದು ತೆರಳಿತ್ತು.
ಇದೇ ದಿನಾಂಕ 26ರಿಂದ ಪ್ರಾರಂಭವಾಗಬೇಕಿದ್ದ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗುವುದು ಎಂದು ದೂರವಾಣಿ ಮೂಲಕ ಉಪಕುಲಪತಿಗಳು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಅಲ್ಲದೆ ನಾಳೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ ನಂತರ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿ ಪರ ನಿರ್ಧಾರ ತೆಗೆದುಕೊಳ್ಳುವೆವು ಎಂದು ಭರವಸೆ ನೀಡಿದ್ದಾರೆ. ಉಪಕುಲಪತಿಗಳ ನಿರ್ದೇಶನದ ಆಧಾರದ ಮೇಲೆ ಕುಲಸಚಿವರು ಅದನ್ನು ಲಿಖಿತವಾಗಿ ನೀಡಿದ್ದಾರೆ ಎಂದು ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ತಿಳಿಸಿದ್ದಾರೆ.