ಹರಪನಹಳ್ಳಿ, ಮಾ.4- ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಪ್ರಾರಂಭವಾಗಿದ್ದು ತಾಂತ್ರಿಕ ಕಾರಣಗಳಿಂದ ವಿಳಂಬ ವಾಗಿದೆ. ಶೀಘ್ರದಲ್ಲೇ ಸಚಿವ ರಿಂದ ಕಾಮಗಾರಿಗೆ ಚಾಲನೆ ದೊರಕಲಿದೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.
ಪಟ್ಟಣದ ಪಂಚಾಯತ್ ರಾಜ್ ಉಪವಿಭಾಗದ ಆವರಣದಲ್ಲಿ ಗುರುವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿಕಲಚೇತನ ಫಲಾನುಭವಿ ಗಳಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ಕಾಮಗಾರಿಯ ಗುತ್ತಿಗೆ ದಾರರು ಮುಂಗಡವಾಗಿ ಹಣ ಪಡೆದಿದ್ದಾರೆಂದು ಆರೋಪ ಕೇಳಿಬರುತ್ತಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಂಗಡವಾಗಿ ಹಣ ಪಡೆದ ಬಗ್ಗೆ ಮಾಹಿತಿ ಇಲ್ಲ. ತುಂಗಭದ್ರಾ ನದಿ ತೀರದಲ್ಲಿ ಬುನಾದಿ ಭದ್ರ ತೆಗೆ ಕಾಮಗಾರಿ ವಿಳಂಬವಾಗಿದೆ. ಗುತ್ತಿಗೆ ದಾರರು ಕಾಮಗಾರಿ ಪೂರ್ಣಮಾಡುತ್ತಾರೆ. ಅದರಂತೆ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಠೇವಣಿ ಹಣವನ್ನು ಇಟ್ಟಿರುತ್ತಾರೆ. ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು.
ತಾಲ್ಲೂಕಿನಲ್ಲಿ 4 ಸಾವಿರ ಅಂಗವಿಕಲರಿದ್ದು, ಕಾಲುಗಳ ತೊಂದರೆ ಇರುವ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಫಲಾನುಭವಿಗಳನ್ನು ಗುರತಿಸಿ, 12 ದ್ವಿಚಕ್ರವಾಹನಗಳನ್ನು ವಿತರಿಸಲಾಗಿದೆ. ಇಲ್ಲಿಯರೆಗೂ 130ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಸಂಚಾರ ಮಾಡಲು ವಾಹನಗಳನ್ನು ಉಪಯೋಗಿಸಿ. ದೂರ ಪ್ರಯಾಣಕ್ಕೆ ದ್ವಿಚಕ್ರ ವಾಹನಗಳನ್ನು ಬಳಬೇಡಿ ಎಂದು ಕಿವಿಮಾತು ಹೇಳಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್, ಸದಸ್ಯರಾದ ಕಿರಣಕುಮಾರ, ದ್ಯಾಮಜ್ಜಿ ರೊಕ್ಕಪ್ಪ, ಎಂ.ಕೆ. ಜಾವೀದ್, ಕೆಂಗಳ್ಳಿ ಪ್ರಕಾಶ, ರಾಘವೇಂದ್ರಶೆಟ್ಟಿ, ತಾ.ಪಂ. ಸದಸ್ಯರುಗಳಾದ ವೈ.ಬಸಪ್ಪ, ಶಿಂಗ್ರಿಹಳ್ಳಿ ನಾಗರಾಜ, ಜಿಲ್ಲಾ ಬಿಜೆಪಿ ಎಸ್.ಟಿ. ಘಟಕದ ಕಾರ್ಯದರ್ಶಿ ಆರ್. ಲೋಕೇಶ್, ಮುಖಂಡರಾದ ಎಂ.ಪಿ. ನಾಯ್ಕ್, ಯಡಿಹಳ್ಳಿ ಶೇಖರಪ್ಪ, ಯು.ಪಿ. ನಾಗರಾಜ, ಸಂತೋಷ್, ಮಜ್ಜಿಗೇರಿ ಭೀಮಪ್ಪ, ನೀಲಗುಂದ ರೆಡ್ಡಿ ಸಿದ್ದೇಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇ ಎ.ಡಿ. ಕಿರಣ್, ಎಇ 2 ಗಜೇಂದ್ರ, ಜೆಇ ಬಸವರಾಜ್, ವ್ಯವಸ್ಥಾಪಕರಾದ ಮಂಜುನಾಥ್, ಎಂ.ಆರ್.ಡಬ್ಲ್ಯೂ ಧನರಾಜ್, ಇನ್ನಿತರರು ಭಾಗವಹಿಸಿದ್ದರು.